ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಭೀಕರ ಪ್ರವಾಹ ಬಂದು ಜನರು ಮನೆ-ಮಠ, ಬದುಕು, ಬೆಳೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾದಾಗ, ಜನರ ಕಷ್ಟ-ನಷ್ಟಗಳನ್ನು ಆಲಿಸಲು ರಾಜ್ಯಕ್ಕೆ ಬಾರದ ಪ್ರಧಾನಿ ಮೋದಿ ಇದೀಗ ರಾಜ್ಯಕ್ಕೆ ಬಂದಿದ್ದಾರೆ. ಜನರ ಕಷ್ಟ-ಸುಖ ಕೇಳುವುದು ದೇಶದ ಪ್ರಧಾನಿ ಕರ್ತವ್ಯ. ಆದರೆ ಪ್ರಧಾನಿ ಮೋದಿ ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ರಾಜ್ಯಕ್ಕೆ ಆಗಮಿಸಿದ್ದನ್ನು ವಿಪಕ್ಷದವರಾಗಿ, ವಿರೋಧ ಪಕ್ಷದ ನಾಯಕನಾಗಿ ನಾನು ಸ್ವಾಗತಿಸುತ್ತೇನೆ. ಪ್ರಧಾನಿ ಹುದ್ದೆ ಯಾವ ಪಕ್ಷಕ್ಕೂ ಸೇರಿದ್ದಲ್ಲಾ. ರಾಜ್ಯದಲ್ಲಿ ಆಗಸ್ಟ್ ತಿಂಗಳಲ್ಲಿ ಭೀಕರ ಪ್ರವಾಹ ಸಂಭವಿಸಿತ್ತು. 23 ಜಿಲ್ಲೆ, 203 ತಾಲೂಕುಗಳಲ್ಲಿ ಪ್ರವಾಹ ಬಂದ ಸಮಯದಲ್ಲಿ ಕರ್ನಾಟಕ್ಕೆ ಬರಲಿಲ್ಲ.
ರಾಜ್ಯದ ಜನರು ಮನೆ, ಮಠ, ಕಳೆದುಕೊಂಡು ಕಷ್ಟ-ನಷ್ಟಕ್ಕೀಡಾಗಿ ಬೀದಿ ಪಾಲಾದ ಸಂದರ್ಭದಲ್ಲಿ ಕಷ್ಟ ಆಲಿಸಲು ರಾಜ್ಯಕ್ಕೆ ಬಂದಿಲ್ಲ. ಕನಿಷ್ಟ ಪಕ್ಷ ಟ್ವೀಟ್ ಮೂಲಕವಾದರೂ ಸಾಂತ್ವನ ಹೇಳಬಹುದಿತ್ತು. ಅದೂ ಮಾಡಿಲ್ಲ. ಜನರ ಕಷ್ಟ-ಸುಖ ಕೇಳುವುದು ದೇಶದ ಪ್ರಧಾನಿ ಕರ್ತವ್ಯ. ಆದರೆ ಅವರು ತಮ್ಮ ಕರ್ತವ್ಯ ನಿಭಾಯಿಸುತ್ತಿಲ್ಲ. ಸೆ.9ರಂದು ಚಂದ್ರಯಾನ ಉಡಾವಣೆಗೆ ಬೆಂಗಳೂರಿಗೆ ಬಂದಿದ್ದರು. ಬೇರೆ ರಾಜ್ಯಗಳು ಸಂಕಷ್ಟಕ್ಕೀಡಾದಾಗ ಅಲ್ಲಿಗೆ ಹೋಗಿ ವಿಚಾರಿಸಿದರು. ಆದರೆ ಕರ್ನಾಟಕಕ್ಕೆ ಬರದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದರು ಎಂದು ಕಿಡಿಕಾರಿದ್ದಾರೆ.
ಪ್ರವಾಹದಲ್ಲಿ ರಾಜ್ಯ ಸರ್ಕಾರ 36 ಸಾವಿರ ಕೋಟಿ ನಷ್ಟ ಅಗಿದೆ ಎಂದು ಹೇಳಿದೆ. ಹಲವು ಬಾರಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ ಮೂರು ತಿಂಗಳ ನಂತರ ಪ್ರಧಾನಿ ಕೊಟ್ಟಿದ್ದು ಕೇವಲ 1200 ಕೋಟಿ ಮಾತ್ರ. ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ನಿನ್ನೆಯೂ ಮನವಿ ಮಾಡಿದರು.
ದೇಶದ ಪ್ರಧಾನಿಯಾದವರು ಪರಿಹಾರ ಕೊಡುವುದಾಗಿ ಹೇಳಬೇಕಿತ್ತು. ಇಲ್ಲ ಕೊನೆ ಪಕ್ಷ ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಅಂತಾದರೂ ಹೇಳಬೇಕಾಗಿತ್ತು. ಆದರೆ ಪ್ರಧಾನಿಯಿಂದ ಯಾವೊಂದು ಭರವಸೆಯೂ ಇಲ್ಲಾ, ಸ್ಪಂದನೆಯೂ ಇಲ್ಲ. ಅಂದರೆ ಕರ್ನಾಟಕದ ಬಗ್ಗೆ ಪ್ರಧಾನಿ ಮೋದಿಯವರಿಗೆ ಎಷ್ಟು ಅಸಡ್ಡೆ, ನಿರ್ಲಕ್ಷ್ಯವಿದೆ ಎಂಬುದು ಅವರ ನಡವಳಿಕೆಯಿಂದಲೇ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಿದ್ದಾಗ ಏನೆಲ್ಲ ಭರವಸೆಗಳನ್ನು ನೀಡಿದ್ದರು ಎಂಬುದನ್ನುಒಮ್ಮೆ ನೆನಪಿಸಿಕೊಳ್ಳಬೇಕು. ನರಸಾಪುರದಲ್ಲಿ ಮಾತನಾಡುವಾಗ 10 ಸಾವಿರ ನೇರ ಉದ್ಯೋಗ, 25 ಸಾವಿರ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದ್ದರು. ಆ ಭರವಸೆ ಏನಾಯಿತು? 2018ರಲ್ಲಿ ಲಘು ಹೆಲಿಕಾಪ್ಟರ್ ಹಾರಾಟಕ್ಕೆ ಚಾಲನೆ ನೀಡಿದ್ದರು. ಆದರೆ, ಒಂದೂ ಹಾರಾಟ ಮಾಡಲಿಲ್ಲ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಬಂದರೆ ರಾಜ್ಯದ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಚುನಾವಣೆ ವೇಳೆ ಮೋದಿ ಹೇಳಿದ್ದರು. ಮೋದಿ ಮಾತು ಕೇಳಿ ರಾಜ್ಯದ ಜನರು 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದರು. ಆದರೆ, ರಾಜ್ಯದ ಭಾಗ್ಯದ ಬಾಗಿಲು ತೆರೆಯುವುದು ಹಾಗಿರಲಿ, ನಮ್ಮ ರಾಜ್ಯದ ಸಚಿವರು, ಇದೇ ಬಿಜೆಪಿ ನಾಯಕರಿಗೇ ಪ್ರಧಾನಿ ಮೋದಿ ಮನೆಯ ಬಾಗಿಲು ತೆರೆಯಲಿಲ್ಲ ಎಂದು ಗುಡುಗಿದರು.
ದೌರ್ಜನ್ಯದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿ, ಪಾಕಿಸ್ತಾನದ ವಿರುದ್ಧ ಹೋರಾಡಲಿ ಎಂದು ಮೋದಿ ಹೇಳಿದ್ದಾರೆ. ಪಾಕಿಸ್ತಾನ ಕೆಟ್ಟ ದೇಶ, ದುಷ್ಟ ರಾಷ್ಟ್ರ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ನೀವು ದೇಶದಲ್ಲಿ ಏನು ಮಾಡುತ್ತಿದ್ದೀರಿ? ಪೌರತ್ವ ಕಾಯ್ದೆ ಜಾರಿ ಮಾಡಿ ಏನು ಮಾಡಲು ಹೊರಟಿದ್ದೀರಿ? ನಿನ್ನೆ ಸಿದ್ದಾಗಾಂಗಾ ಮಠದಲ್ಲಿ ಮಕ್ಕಳ ಮಕ್ಕಳ ಮುಂದೆ ಅವರ ಭವಿಷ್ಯದ ಕುರಿತಾಗಿ ಮಾತನಾಡುವುದನ್ನು ಬಿಟ್ಟು ಸಿಎಎ, ಎನ್ ಆರ್ ಸಿ ಬಗ್ಗೆ ಹೇಳುತ್ತಾ ಧರ್ಮದ ಆಧಾರದ ಮೇಲೆ ದೇಶ ಒಡೆಯುವ ಬಗ್ಗೆ ಮಾತನಾಡುವ ಮೂಲಕ ನಿಮ್ಮ ಕೊಳಕು ರಾಜಕೀಯ ಭಾಷಣವನ್ನು ಮಕ್ಕಳಿಗೆ ಹೇಳಿದ್ದೀರಾ. ಇದರ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದ್ದಾರೆ.
ಇನ್ನು ಪ್ರಧಾನಿ ಮೋದಿ ಆಡಳಿತದಲ್ಲಿ ದೇಶ ದಿವಾಳಿ ಅಂಚಿಗೆ ತಲುಪುತ್ತಿದೆ. ದೇಶದ ಜಿಡಿಪಿ ಶೇ.4ರಷ್ಟಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಶೇ.2ಕ್ಕೆ ಕುಸಿತವಾಗಿದೆ. ಇವರದೇ ಪಕ್ಷದ ಮುಖಂಡರಾದ ಸುಬ್ರಹ್ಮಣ್ಯನ್ ಸ್ವಾಮಿಯವರೇ ಜಿಡಿಪಿ ಕುಸಿದಿದ್ದು, ಶೇ.2 ರಿಂದ 2.5ರಷ್ಟಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ರಾಜ್ಯಕ್ಕೆ ಜಿಎಸ್ಟಿ ತೆರಿಗೆ ಹಣ 5,600 ಕೋಟಿ ರೂ. ಬಂದಿಲ್ಲ. ಸ್ವಚ್ಛ ಭಾರತ ಯೋಜನೆಯ ಹಣವೂ ಬರಬೇಕು. ಕುಡಿಯೋ ನೀರಿಗೆ 2,700 ಕೋಟಿ ರೂ. ಬರಬೇಕು. ಹಳ್ಳಿಗರ ಕೊಳ್ಳುವ ಶಕ್ತಿ ಶೇ. 8.8ರಷ್ಟು ಕಡಿಮೆಯಾಗಿದೆ. ಹೂಡಿಕೆ ಇಲ್ಲದಿದ್ದರೆ ಉದ್ಯೋಗ ಸೃಷ್ಟಿಯಾಗುವುದಿಲ್ಲ. ಬ್ಯಾಂಕ್ಗಳು ದಿವಾಳಿಯಾಗಿ ಹೋಗಿವೆ. ಸಾಲಗಳು ಸಿಗುತ್ತಿಲ್ಲ, ಇನ್ ವೆಸ್ಟ್ ಮೆಂಟ್ ಮಾಡಲು ಸಾಧ್ಯವಾಗುತ್ತಿಲ್ಲ. ಇದೆಲ್ಲ ಆರ್ಥಿಕತೆ ಸಾಮಾನ್ಯ ಜ್ನಾನ ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅರ್ಥವಾಗಿದೆಯೋ ಇಲ್ಲವೋ ಗೊತ್ತಿಲ್ಲ ಎಂದರು.
ಕರ್ನಾಟಕ ಆರ್ಥಿಕ ದಿವಾಳಿಯತ್ತ ಸಾಗಿದೆ ಎಂದು ನಾನು ಸತ್ಯ ಹೇಳಿದರೆ ಬಿಜೆಪಿ ನಾಯಕರೆಲ್ಲರೂ ಮೈ ಪರಚಿಕೊಂಡು ನನ್ನ ಮೇಲೆ ಮುಗೀ ಬೀಳುತ್ತಾರೆ. ಇದ್ದದ್ದು ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ ಎಂಬ ಮಾತಿದೆ ಹಾಗೆ ಮಾಡುತ್ತಾರೆ ರಾಜ್ಯ ಬಿಜೆಪಿ ನಾಯಕರು. ಇನ್ನು ಆರ್ಥಿಕತೆ ಬಗ್ಗೆ ಗೊತ್ತಿದೆಯೋ ಇಲ್ಲವೋ ರೇಣುಕಾಚಾರ್ಯಗೆ, ಅವರೂ ಸೇರಿದಂತೆ ಎಲ್ಲರೂ ಮಾತನಾಡುವವರೇ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ