*ಮಹಿಳಾ ಉದ್ಯಮಿಗಳಿಗೆ ಗುಡ್ ನ್ಯೂಸ್: ಸರ್ಕಾರದಿಂದ ತ್ವರಿತ ಸಾಲ ಸೌಲಭ್ಯ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಮಹಿಳೆಯರು ಸಣ್ಣ ಪ್ರಮಾಣದ ಉದ್ಯಮಗಳನ್ನು ಸ್ಥಾಪಿಸಲು ಸರ್ಕಾರವು ಆರ್ಥಿಕವಾಗಿ ಮತ್ತು ಎಲ್ಲ ರೀತಿಯಲ್ಲಿ ಬೆಂಬಲ ನೀಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ ಅವರು ಭರವಸೆ ನೀಡಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ಉದ್ದಿಮೆದಾರರ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಮಹಿಳಾ ಉದ್ಯಮಿಗಳಿಗೆ ಅಥವಾ ಸ್ವಂತ ಉದ್ಯಮ ಆರಂಭಿಸಲು ಬಯಸುವ ಮಹಿಳೆಯರಿಗೆ ಸರ್ಕಾರವು ಶೇಕಡಾ 3ರ ವಾರ್ಷಿಕ ಬಡ್ಡಿದರದಲ್ಲಿ 5 ಕೋಟಿ ರೂಪಾಯಿಗಳವರೆಗೆ ಸಾಲ ಸೌಲಭ್ಯ ನೀಡುತ್ತದೆ ಎಂದರು.
ಹೆಚ್ಚಿನ ಮಹಿಳೆಯರು ಸ್ವಂತ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಮತ್ತು ಉದ್ಯೋಗಗಳನ್ನು ಬೇರೆಯವರಿಗೆ ಒದಗಿಸುವ ಮೂಲಕ ಆರ್ಥಿಕವಾಗಿ ಸ್ವತಂತ್ರರಾಗಿ ಸ್ವಾವಲಂಬಿಗಳಾಗಲು ಮುಂದೆ ಬರುತ್ತಿರುವುದರಿಂದ ಸರ್ಕಾರವು ಅಂತಹ ಚಿಂತನೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಎಂದು ಹೇಳಿದರು.

ಮಹಿಳೆಯರನ್ನು ಸಬಲೀಕರಣಗೊಳಿಸುವ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರವು 32,000 ಕೋಟಿ ರೂಪಾಯಿಗಳನ್ನು ನೀಡಿದೆ. ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ವಾರ್ಷಿಕ 52 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಹೇಳಿದರು.
ನಾನು ರೈತನ ಮಗಳು, ನಾನು ಎರಡು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಎಷ್ಟೋ ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರುತ್ತಾ ಇದ್ದಾರೆ. ಪ್ರತಿ ಯಶಸ್ಸಿ ಪುರುಷನ ಜೊತೆಯೇ ಮಹಿಳೆ ಇದ್ದಾಳೆ. ಹೆಣ್ಣು ಹುಟ್ಡಿದರೆ ಖುಷಿ ಪಡುವ ಕಾಲ ಬಂದಿದೆ. ಮಹಿಳೆಯರಿಗೆ ಉತ್ತಮ ಅವಕಾಶ ಬಂದಿದೆ. ಮಹಿಳೆಗೆ ಬೇಕಿರುವುದು ಧೈರ್ಯ ಒಂದೇ ಎಂದು ಹೇಳಿದರು.
ಈ ವೇಳೆ ಎಫ್ ಕೆಸಿಸಿ ಅಧ್ಯಕ್ಷರಾದ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷರಾದ ಸಾಯಿ ಪ್ರಸಾದ್, ಉಪಾಧ್ಯಕ್ಷರಾದ ಬಿ.ಪಿ.ಶಶಿಧರ್, ಡೆನ್ಮಾರ್ಕ್‌ನ ಕೌನ್ಸಿಲ್ ಜನರಲ್ ಪೀಟರ್ ವಿಂಟರ್ ಶಿಮಿಡ್ತ್, ಜಪಾನ್ ಮಿಹೊ ಸಕತ ಮಲ್ಹಾನ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.




