
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೆಲವೆಡೆ ಕಸದ ವಾಹನಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಇನ್ನು ಕೆಲವೆಡೆ ಮನೆಬಳಿ ಕಸದ ವಾಹನಗಳು ಬರುವುದಿಲ್ಲ. ಬಂದರೂ ರಸ್ತೆಯ ಯಾವುದೋ ತುದಿಯಲ್ಲಿ ನಿಂತು ಕೆಲ ಮನೆಗಳವರಿಂದ ಕಸ ಸಂಗ್ರಹಿಸಿ ಹೋಗುತ್ತಾರೆ. ಅದೇಷ್ಟೋ ಬಾರಿ ಮನೆಯಿಂದ ಹೊರಬಂದು ವಾಹನದ ಬಳಿ ಕಸ ತೆಗೆದುಕೊಂಡು ಹೋಗುವಷ್ಟರಲ್ಲಿ ಕಸದ ವಾಹನವೇ ಹೊರಟು ಹೋಗಿರುತ್ತದೆ. ಕಸದ ಸಿಬ್ಬಂದಿ ವಾರ್ಡ್ ಗಳ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದ್ದರೂ ಎತ್ತಿಕೊಂಡು ಹೋಗಲು ಬಾರದೇ ನಿರ್ಲಕ್ಷವಹಿಸುವುದು ಮುಂದುವರೆದಿದೆ.
ಮೂರ್ನಾಲ್ಕು ದಿನ ಕಳೆದರೂ ಕಸದ ವಾಹನ ಬಾರದಿದ್ದಾಗ ಬೇಸತ್ತ ನಿವಾಸಿಗಳು ಖಾಲಿ ಜಾಗಗಳಲ್ಲಿ ಕಸ ಸುರಿಯುವ ಸ್ಥಿತಿ ಮುಂದುವರೆದಿದೆ. ಇದೇ ರೀತಿ ಎಷ್ಟು ದಿನವಾದರೂ ಕಸದ ವಾಹನ ಬಾರದಿದ್ದಕ್ಕೆ ರೊಚ್ಚಿಗೆದ್ದ ನಿವಾಸಿಗಳು ಗ್ರಾಮ ಪಂಚಾಯಿತಿ ಕಚೇರು ಮುಂದೆ ಕಸ ಸುರುದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಎಲ್ಲೆಂದರಲ್ಲಿ ಕಸ ಸುರಿಯುವವರನ್ನು ಕಂಡರೆ ಜಿಬಿಎ ಸಿಬ್ಬಂದಿ ಅವರ ಮನೆ ಬಾಗಿಲಲ್ಲಿ ಕಸದ ಲಾರಿಯಲ್ಲಿ ಕಸ ತಂದು ಸುರುಯುವ ಅಭಿಯಾನ ಆರಂಭಿಸಿದ್ದರು. ಈಗ ಜನರು ಕಚೇರಿ ಮುಂದೆ ಕಸ ಸುರಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನೆಲ ಮಂಗಲದ ಸೋಂಪುರದಲ್ಲಿ ಕಸದ ವಾಹನ, ಸಿಬ್ಬಂದಿಗಳು ಮನೆ ಬಳಿ ಬಂದು ಕಸ ತೆಗೆದುಕೊಂಡು ಹೋಗದ ಕಾರಣಕ್ಕೆ ಆಕ್ರೋಶಗೊಂಡ ಜನರು ವಾಹನದಲ್ಲಿ ಕಸ ತುಂಬಿಕೊಂಡು ಹೋಗಿ ಗ್ರಾಮ ಪಂಚಾಯಿತಿ ಕಚೇರಿ ಬಾಗಿಲಲ್ಲಿ ಕಸ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.



