Karnataka NewsLatestPolitics

*ಅಧಿಕಾರ ಎಂಬುದು ಶಾಶ್ವತ ಅಲ್ಲ,‌ ಅದು ಅವಕಾಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಮಕ್ಕಳೊಂದಿಗೆ ಸಂವಾದ ನಡೆಸಿದ ಸಚಿವರು

ಪ್ರಗತಿವಾಹಿನಿ ಸುದ್ದಿ: ಅಧಿಕಾರ ಎಂಬುದು ಶಾಶ್ವತ ಅಲ್ಲ, ಅದು ಸಿಗುವ ಅವಕಾಶ. ಅದನ್ನು ಸೂಕ್ತವಾಗಿ ಬಳಸಿಕೊಂಡು ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ -25 ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರೊಡನೆ ಮಕ್ಕಳ ಸಮಾಲೋಚನೆ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಪ್ರತಿಯೊಬ್ಬರು ಜೀವನದಲ್ಲಿ ತಮ್ಮದೇ ಆದ ಗುರಿ ಇಟ್ಟು ಕೊಳ್ಳಬೇಕು ಎಂದು ಕರೆ ನೀಡಿದರು.

ನಾವು ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ನಂಬರ್ 1 ಸ್ಥಾನಕ್ಕೇರಲು ಪ್ರಯತ್ನಿಸಬೇಕು. ತಂದೆ, ತಾಯಿ, ಶಿಕ್ಷಕರ ಕನಸನ್ನು ನನಸಾಗಿಸಬೇಕು. ಪ್ರತಿಯೊಂದಕ್ಕೂ ಗುರಿ ಇಟ್ಟುಕೊಂಡು ಮುಂದೆ ಸಾಗಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Home add -Advt

ಮಕ್ಕಳ ರಕ್ಷಣೆಗೆ, ಮಕ್ಕಳ ಹಕ್ಕುಗಳನ್ನು ಕಾಪಾಡಲು ಸರ್ಕಾರ ಸಿದ್ಧವಿದೆ. ಸರ್ಕಾರ ಯಾವಾಗಲೂ ಮಕ್ಕಳ ಜೊತೆಗಿರುತ್ತದೆ. ಜಾತ್ಯಾತೀತವಾಗಿ, ಸುಶಿಕ್ಷಿತರಾಗಿ, ಸಂವಿಧಾನ ‌ಆರಾಧಕರಾಗಿ ಬೆಳೆಯಬೇಕು ಎಂದು ಸಚಿವರು ಕರೆ ನೀಡಿದರು.

ನಾನು ಏಳನೇ ತರಗತಿಗೆ ಬರುವವರೆಗೂ ನನ್ನ ಜಾತಿ ಯಾವುದು ಎಂದು ಗೊತ್ತಿರಲಿಲ್ಲ. ನಾನು ಶಾಲೆಯಲ್ಲಿ ಕಲಿಯುವಾಗ ಪ್ರಸಿದ್ಧರೊಬ್ಬರ ಭಾಷಣದಿಂದ ಪ್ರೇರಿತಳಾದೆ. ಅವರ ಭಾಷಣ ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮೊಬೈಲ್ ನಿಂದ ದೂರ ಇರಿ

ಮಕ್ಕಳ ಪಾಲಿಗೆ ಮೊಬೈಲ್ ಎಂಬುದು ಸಾಮಾಜಿಕ ಪೀಡುಗಾಗಿದೆ. ಅದು ಕೇವಲ ಶಿಕ್ಷಕರ ಹೊಣೆಯಲ್ಲ. ಮನೆಯಲ್ಲಿ ಪಾಲಕರು ಮಕ್ಕಳು ಮೊಬೈಲ್ ಬಳಸದಂತೆ ನಿಗಾವಹಿಸಬೇಕು. ಮೊಬೈಲ್ ನಿಂದ ಮಕ್ಕಳು ದೂರ ಇದ್ದರಷ್ಟೂ ಎತ್ತರಕ್ಕೆ ಬೆಳೆಯುತ್ತಾರೆ ಎಂದರು.

ಅಪೌಷ್ಟಿಕತೆ ಹೋಗಲಾಡಿಸಲು ಹೋರಾಟ

ಕರ್ನಾಟಕದ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಹೋರಾಟವನ್ನೇ ಮಾಡುತ್ತಿದೆ. 1999ರಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದ ಯೋಜನೆಯನ್ನು ಜಾರಿಗೆ ತಂದರು. ಬಳಿಕ 2013 ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಶಾಲಾ‌ ಮಕ್ಕಳಿಗೆ ಮೊಟ್ಟೆ ಹಾಗೂ ಹಾಲು ನೀಡಲಾಗುತ್ತಿದೆ ಎಂದರು.

ಇದಕ್ಕೂ ಮೊದಲು ಇಂದಿರಾ ಗಾಂಧಿಯವರು 1975 ರಲ್ಲಿ ಬಡ ಮಕ್ಕಳಿಗೂ ಅಪೌಷ್ಟಿಕ ಆಹಾರ ಹಾಗೂ ಗುಣಮಟ್ಟದ ಶಿಕ್ಷಣ ಸಿಗುವ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದರು. ಕರ್ನಾಟಕದಲ್ಲಿ ಇಂದು 35 ಲಕ್ಷ ಮಕ್ಕಳು ಅಂಗನವಾಡಿ ಯಲ್ಲಿ ಕಲಿಯುತ್ತಿದ್ದಾರೆ ಎಂದು ಸಚಿವರು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.

ನಿಶ್ಚಿತಾರ್ಥ ಮಾಡಿದರೂ ಕ್ರಮ
ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರ‌ ಕಠಿಣ ಕ್ರಮಕೈಗೊಳ್ಳಲಿದೆ. 18 ವರ್ಷ ಮೀರದೆ ನಿಶ್ಚಿತಾರ್ಥ ಮಾಡಿದರೂ ಶಿಕ್ಷೆಗೆ ಗುರಿ ಪಡಿಸಲಾಗುವುದು. ಬಾಲ್ಯ ವಿವಾಹ ಮುಕ್ತ ಗ್ರಾಮ ಪಂಚಾಯತಿಗಳಿಗೆ ಇಲಾಖೆ ವತಿಯಿಂದ ‌ 25 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದ ಸಚಿವರು, ಮಕ್ಕಳ ಹಾಗೂ ಮಹಿಳೆಯರ ರಕ್ಷಣೆಗಾಗಿಯೇ ಅಕ್ಕ ಪಡೆಯನ್ನು ಆರಂಭಿಸಲಾಗುತ್ತಿದೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರ ರಕ್ಷಣೆಗೆ ಬದ್ಧ
ಮಕ್ಕಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಚುನಾವಣೆ ಕೆಲಸಗಳಿಂದ ಮುಕ್ತಿಕೊಡಿಸಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿದ್ದಾರೆ. ರಾಜ್ಯಾದ್ಯಂತ 70 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, 50,000 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾನು ಸಚಿವೆಯಾದ ಬಳಿಕ ಕಳೆದ ಎರಡೂವರೆ ವರ್ಷಗಳಲ್ಲಿ 200 ಕೋಟಿ ರೂಪಾಯಿಗಳನ್ನು ಅಂಗನವಾಡಿ ಕಟ್ಟಡಗಳಿಗೆ ಮೀಸಲಿಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮಕ್ಕಳ ರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ
ಮಕ್ಕಳ ರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ. ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜವಾಬ್ದಾರಿ ಅಲ್ಲ, ಶಿಕ್ಷಣ, ಕಂದಾಯ, ಆರೋಗ್ಯ, ಗೃಹ ಇಲಾಖೆ ಸೇರಿದಂತೆ ಇತರ ಇಲಾಖೆಗಳು ಒಗ್ಗೂಡಿ ಮಕ್ಕಳ ಹಿತರಕ್ಷಣೆ ಬದ್ದವಾಗಬೇಕು ಎಂದರು.

ಸುಮಾರು‌ 2 ಗಂಟೆಗಳ ಕಾಲ ನಡೆದ ಸಂವಾದ
ರಾಜ್ಯಾದ್ಯಂತ ನಾಲ್ಕು ವಿಭಾಗಗಳಿಂದ ಸುಮಾರು 120 ಶಾಲಾ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು. ಸುಮಾರು‌ ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಸಚಿವರ ಬಳಿ ವಿವಿಧ ಪ್ರಶ್ನೆಗಳನ್ನು ಕೇಳುವ ಮೂಲಕ ಗಮನಸೆಳೆದರು. ಇಂದು ವಿಶ್ವ‌ ಮಕ್ಕಳ ದಿನದ ಅಂಗವಾಗಿ ಮಕ್ಕಳೊಂದಿಗೆ ಸಚಿವರು ಸಂವಾದ ನಡೆಸಿದರು.

ಈ ವೇಳೆ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ ಎಸ್. ಕೋಸುಂಬೆ, ಸಿವಿಕ್ ಮತ್ತು ಚೈಲ್ಡ್ ರೈಟ್ಸ್ ಟ್ರಸ್ಟ್ ನ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಟಿ.ಎಚ್. ವಿಶ್ವನಾಥ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ‌ಬಿ.ಎಚ್.ನಿಶ್ಚಲ್, ಎಂ.ಎ.ವಾಸುದೇವ ಶರ್ಮ, ಕೆ.ಟಿ.ತಿಪ್ಪೇಸ್ವಾಮಿ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button