
ಪ್ರಗತಿವಾಹಿನಿ ಸುದ್ದಿ : ಐದು ವರ್ಷದ ಹೆಣ್ಣು ಮಗುವನ್ನು ಚಿರತೆ ಹೊತ್ತೊಯ್ದು ಕೊಂದು ಹಾಕಿರುವ ದಾರುಣ ಘಟನೆ ತರೀಕರೆಯ ಕುಡೂರು ಗೇಟ್ ಸಮೀಪದ ನವಿಲೇಕಲ್ಲು ಗುಡ್ಡದಲ್ಲಿ ನಡೆದಿದ್ದು, ಮಗುವಿನ ಶವ ಕಾಡಿನಲ್ಲಿ ಪತ್ತೆಯಾಗಿದೆ.
ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಮಚಂದ್ರಪ್ಪ ಅವರ ತೋಟದಲ್ಲಿ ಬಾಗಲಕೋಟೆ ಮೂಲದ ಬಸವರಾಜು ಮತ್ತು ರೇಣುಕಮ್ಮ ಐದು ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರ ಮಗಳಾದ ಸಾನ್ವಿ ನಿನ್ನೆ ಸಂಜೆ ಮನೆಯ ಮುಂದೆ ಆಟವಾಡುತ್ತಿದ್ದಾಗ ಚಿರತೆ ಹೊತ್ತೊಯ್ದಿತ್ತು.
ಕೂಡಲೇ ಮನೆಯವರು ಬೊಬ್ಬೆ ಹಾಕಿ ಚಿರತೆಯನ್ನು ಹಿಂಬಾಲಿಸಿದ್ದರು. ತಡರಾತ್ರಿಯ ವೇಳೆ ಕಾಡಿನಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯ ಶಾಸಕ ಶ್ರೀನಿವಾಸ ಸ್ಥಳಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.

