*ಪೊಲೀಸರ ವಿರುದ್ಧ ಕಿರುಕುಳ ಆರೋಪ: ರಸ್ತೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಟೋ ಚಾಲಕ*

ಪ್ರಗತಿವಾಹಿನಿ ಸುದ್ದಿ: ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆಟೋ ಚಾಲಕನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಚಿತ್ರದುರ್ಗದ ಗಾಂಧಿವೃತ್ತದಲ್ಲಿ ಆಟೋ ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುಟ್ಟ ಗಾಯಗಳಿಂದ ಗಂಭೀರವಾಗಿರುವ ಆಟೋ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರದುರ್ಗದ ಮಾಳಪ್ಪನಹಟ್ಟಿ ಗ್ರಾಮದ ತಿಪ್ಪೇಸ್ವಾಮಿ (35) ಎಂಬುವವರು ಆಟೋ ಒಡಿಸುತ್ತಿದ್ದರು. ಈ ವೇಳೆ ಗಾಂಧಿವೃತ್ತದಲ್ಲಿ ಆಟೋ ತಡೆದ ಪೊಲೀಸರು ಕುಡಿದ ಮತ್ತಿನಲ್ಲಿ ಆಟೋ ಚಾಲನೆ ಮಾಡುತ್ತಿರುವುದಾಗಿ ಶಂಕೆ ಇದೆ ಎಂದು ಆಟೋದಿಂದ ಇಳಿಸಿ ಪರಿಶೀಲಿಸಿದ್ದಾರೆ. ಅಲ್ಲದೇ ಯುನಿಫಾರ್ಮ್ ಕೂಡ ಇಲ್ಲ ಹಾಗಾಗಿ ನಿಯಮ ಉಲ್ಲಂಘನೆ ಮಾಡುತ್ತಿದ್ದೀಯಾ ಎಂದು ಬೈದಿದ್ದಾರೆ. ಇದೇ ವೇಳೆ ಆಟೋ ಚಾಲಕ ತನ್ನ ಮೊಬೈಲ್ ಕ್ಯಾಮರಾ ಆನ್ ಮಾಡಿಕೊಂಡು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾನೆ.
ಮಾತಿನ ಬರದಲ್ಲಿ ತಾನು ಕುಡಿದಿದ್ದೇನೆ ಎಂದು ಪೊಲೀಸರಿಗೆ ಹೇಳಿದ್ದಾನೆ. ಈ ವೇಳೆ ಪೊಲೀಸರು ಕುಡಿದ ಮತ್ತಿನಲ್ಲಿ ಇತರ ಮೇಲೆ ಗಾಡಿ ಹಾಯಿಸಲು ಹೋಗಿದ್ದಾನೆಂದು ಆರೋಪಿಸಿದ್ದಾರೆ. ವಾಗ್ವಾದ ತಾರಕ್ಕೇರಿದ್ದು, ನೊಂದ ಆಟೋ ಚಾಲಕ ಗಾಂಧಿ ವೃತ್ತದಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ತಕ್ಷಣ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಟೋ ಚಾಲಕನ ಮೇಲೆ ಪೊಲೀಸರ ಕಿರುಕುಳ ಖಂಡಿಸಿ ಆಟೋಚಾಲಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.


