
ಪ್ರಗತಿವಾಹಿನಿ ಸುದ್ದಿ: ಇದೆ ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೃಷ್ಣನಗರಿ ಉಡುಪಿಗೆ ಭೇಟಿ ನೀಡುತ್ತಿದ್ದು, ಬೃಹತ್ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋಗೆ ಬೇಕಾಗುವ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ.
ಪ್ರಧಾನಿ ಮೋದಿ, ಉಡುಪಿಯ ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್ವರೆಗೆ ರೋಡ್ ಶೋ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಈ ಕುರಿತು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ ಅವರು ಮಾಹಿತಿ ನೀಡಿದ್ದು, ಬೆಳಿಗ್ಗೆ ಗಂಟೆ 11:40ಕ್ಕೆ ಪ್ರಧಾನಿ ಮೋದಿ ಅವರ ರೋಡ್ ಶೋ ಉಡುಪಿ-ಬನ್ನಂಜೆಯ ಡಾ.ವಿ.ಎಸ್. ಆಚಾರ್ಯ ಬಸ್ ನಿಲ್ದಾಣದ ಬಳಿ ಶ್ರೀ ನಾರಾಯಣ ಗುರು ಸರ್ಕಲ್ನಿಂದ ಪ್ರಾರಂಭಗೊಂಡು ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಕಲ್ಸಂಕ ಜಂಕ್ಷನ್ ವರೆಗೆ ಸಾಗಲಿದೆ ಎಂದು ಹೇಳಿದ್ದಾರೆ.
ಕಲ್ಸಂಕ ರಸ್ತೆಯಿಂದ ನೇರವಾಗಿ ಪಾರ್ಕಿಂಗ್ ಏರಿಯಾ-ರಥಬೀದಿ ಮೂಲಕ ಮಧ್ಯಾಹ್ನ ಗಂಟೆ 12ಕ್ಕೆ ಶ್ರೀ ಕೃಷ್ಣ ಮಠವನ್ನು ತಲುಪಿ, ಶ್ರೀ ಕೃಷ್ಣ ದರ್ಶನ ಪಡೆಯಲಿದ್ದಾರೆ. ನಂತರ ಲಕ್ಷ ಗೀತಾ ಪಾರಾಯಣದಲ್ಲಿ ಭಾಗವಹಿಸಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಉಡುಪಿ ಜಿಲ್ಲಾ ಬಿಜೆಪಿಯಿಂದ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ರೋಡ್ ಶೋ ಮಾರ್ಗದಲ್ಲಿ, ಸಾಂಸ್ಕೃತಿಕ ತಂಡಗಳು ಯಕ್ಷಗಾನ, ಹುಲಿ ನೃತ್ಯ ತಂಡಗಳು ಮತ್ತು ಶ್ರೀಕೃಷ್ಣನ ವೇಷ ಧರಿಸಿದ ಕಲಾವಿದರು ಸೇರಿದಂತೆ ಕರಾವಳಿ ಕರ್ನಾಟಕದ ಕಲಾ ಪ್ರಕಾರಗಳನ್ನು ಪ್ರದರ್ಶನಗೊಳ್ಳಲಿವೆ.
ರಸ್ತೆಯ ಒಂದು ಬದಿಯಲ್ಲಿ ಬ್ಯಾರಿಕೇಡ್ಗಳನ್ನು ಸ್ಥಾಪಿಸಲಾಗಿದ್ದು, ಪ್ರಧಾನಿಯನ್ನು ಸ್ವಾಗತಿಸಲು 30,000 ಕ್ಕೂ ಹೆಚ್ಚು ಜನರು ಸಾಲುಗಟ್ಟಿ ನಿಲ್ಲುವ ನಿರೀಕ್ಷೆಯಿದೆ.
ರೋಡ್ ಶೋ ವೀಕ್ಷಣೆ ಮಾಡುವ ಸಮಸ್ತ ನಾಗರಿಕರು ಅಂದು ಬೆಳಿಗ್ಗೆ ಗಂಟೆ 10:30ರೊಳಗೆ ಬನ್ನಂಜೆ-ಕಲ್ಸಂಕ ರಸ್ತೆಯ ಇಕ್ಕೆಲಗಳಲ್ಲಿ ಉಪಸ್ಥಿತರಿರುವಂತೆ ಕೋರಲಾಗಿದೆ. ಕಾರ್ಯಕ್ರಮದಲ್ಲಿ ಜಿಲ್ಲೆಯ 1,112 ಮತಗಟ್ಟೆಗಳ ಪ್ರತೀ ಬೂತ್ಗಳಿಂದ ತಲಾ 12 ಮಂದಿಯ ತಂಡ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಬಿಜೆಪಿಯಿಂದ ಆದೇಶಿಸಲಾಗಿದೆ.
ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ. ರಾಘವೇಂದ್ರ, ಕ್ಯಾ. ಬ್ರಿಜೇಶ್ ಚೌಟ ಸಹಿತ ಜಿಲ್ಲೆಯ ಶಾಸಕರು, ರಾಜ್ಯದ ಪ್ರಮುಖ ನಾಯಕರು ಈ ಭಾವನಾತ್ಮಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.




