*ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ: ಬಿಮ್ಸ್ ನಿರ್ದೇಶಕ ಡಾ. ಅಶೋಕ ಕುಮಾರ ಶೆಟ್ಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಷ್ಟ್ರದ ಆತ್ಮದಂತಿರುವ ಸಂವಿಧಾನದ ಆಶಯಗಳನ್ನು ಅರಿತುಕೊಂಡು ಹಕ್ಕು ಮತ್ತು ಕರ್ತವ್ಯಗಳನ್ನು ಸಮನಾಗಿ ನಿಭಾಯಿಸುವುದರ ಮೂಲಕ ಸಂವಿಧಾನವನ್ನು ಗೌರವಿಸುವುದು, ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ. ಅಶೋಕ ಕುಮಾರ ಶೆಟ್ಟಿ ಹೇಳಿದರು.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್)ಯಲ್ಲಿ ನಡೆದ “ಸಂವಿಧಾನ ದಿನಾಚರಣೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಸಂವಿಧಾನ ಜಗತ್ತಿಗೇ ಮಾದರಿಯಾಗಿದೆ. ಇಂತಹ ಆದರ್ಶ ಸಂವಿಧಾನ ರಚನೆಯಲ್ಲಿ ಶ್ರಮವಹಿಸಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸೇರಿದಂತೆ ಎಲ್ಲ ಮಹನೀಯರು ಸ್ಮರಣೀಯರಾಗಿದ್ದು, ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕೆಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಂವಿಧಾನ ಪೀಠಿಕೆಯ ಓದಿನೊಂದಿಗೆ ಪ್ರತಿಜ್ಞೆ ಸ್ವೀಕರಿಸಲಾಯಿತು.
ವೈದ್ಯಕೀಯ ಅಧೀಕ್ಷಕ ಡಾ. ಈರಣ್ಣ ಪಲ್ಲೇದ, ಹಣಕಾಸು ಅಧಿಕಾರಿ ಶಿಲ್ಪಾ ವಾಲಿ, ಜಿಲ್ಲಾ ಶಸ್ತ್ರಚಿಕಿತ್ಸಕ
ಡಾ. ಕೇಶವ ಹೆಚ್. ಬಿ, ಸ್ಥಾನಿಕ ವೈದ್ಯಾಧಿಕಾರಿ ಡಾ. ಸರೋಜಾ ತಿಗಡಿ, ಡಾ. ಉಮೇಶ ಕುಲಕರ್ಣಿ ವೇದಿಕೆಯಲ್ಲಿದ್ದರು. ವೈದ್ಯರು ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



