
ಪ್ರಗತಿವಾಹಿನಿ ಸುದ್ದಿ: ಬಾಬಾಬುಡನ್ ಗಿರಿಯ ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿ ಹಿನ್ನೆಲೆಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ.
ಹಿಂದೂ ಪರ ಸಂಘಟನೆಗಳು ಬಾಬಾಬುಡನ್ ಗಿರಿಯ ಇನಾಂ ದತ್ತಾತ್ರೇಯ ಪೀಠದಲ್ಲಿ ದಂತ ಜಯಂತಿ ಆಚರಿಸುತ್ತಿದ್ದು, ನಾಳೆಯಿಂದ ಮೂರು ದಿನಗಳಕಾಲ ದತ್ತ ಜಯಂತಿ ನಡೆಯಲಿದೆ. ಬುಧವಾರ ಬೃಹತ್ ಶೋಭಾ ಯಾತ್ರೆ ಆಯೋಜಿಸಲಾಗಿದೆ. ಡಿಸೆಂಬರ್ 4ರಂದು ದತ್ತ ಪಾದುಕೆ ದಶನ ಇದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಚಿಕ್ಕಮಗಳೂರಿನಾದ್ಯಂತ ಜಿಲ್ಲಾಡಲಿತ ಹಾಗೂ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದ್ದು, ಎಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ನಡೆಯಲಿರುವ ವಾರದ ಸಂತೆಗೆ ನಿಷೇಧ ಹೇರಲಾಗಿದೆ. ಚಿಕ್ಕಮಗಳೂರು ನಗರ ಸೇರಿ ಜಿಲ್ಲೆಯ ಪ್ರಮುಖ ಪಟ್ಟಣಗಳು ಬಂದ್ ಆಗಿರಲಿವೆ. ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ಆದೇಶ ನೀಡಿದೆ.
ಚಂದ್ರದ್ರೋಣ ಪರ್ವತ ಸಾಲಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸೇರಿದಂತೆ ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಇನ್ನು ಇಂದಿನಿಂದ ಡಿಸೆಂಬರ್ 5ರ ಬೆಳಿಗ್ಗೆ 10ಗಂಟೆಯವರೆಗೆನಿರ್ಬಂಧ ವಿಧಿಸಲಾಗಿದೆ.



