*ರಸ್ತೆಗುಂಡಿ ಭಾಗ್ಯಕ್ಕೆ 558 ಬಲಿ: ಅಮಾಯಕ ನಾಗರಿಕರು ನಡುರಸ್ತೆಯಲ್ಲಿ ಪ್ರಾಣ ಬಿಡುವ ದುಸ್ಥಿತಿ: ಸರ್ಕಾರ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಮುಳುಗಿದೆ*

ಆರ್.ಅಶೋಕ್ ಆಕ್ರೋಶ ಆಕ್ರೋಶ
ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಪವರ್ ಶೇರಿಂಗ್, ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ರಸ್ತೆಗುಂಡಿ ಭಾಗ್ಯಕ್ಕೆ 558 ಜನ ಬಲಿಯಾಗಿದ್ದಾರೆ. ಸರ್ಕಾರ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ 5 ಮಹಾನಗರಗಳಲ್ಲಿ ಕಳೆದ 11 ತಿಂಗಳಲ್ಲಿ ರಸ್ತೆಗುಂಡಿಗಳಿಂದ 558 ಸಾವುಗಳಾಗಿರುವ ಆತಂಕಕಾರಿ ಅಂಕಿ-ಅಂಶ ಬೆಳಕಿಗೆ ಬಂದಿದ್ದು, ರಾಜ್ಯ ಸರ್ಕಾರದ ದುರಾಡಳಿತ, ಅಸಮರ್ಥತೆಗೆ ಅಮಾಯಕ ನಾಗರಿಕರು ನಡುರಸ್ತೆಯಲ್ಲಿ ಪ್ರಾಣ ಬಿಡುವ ದುಸ್ಥಿತಿ ಎದುರಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ರಾಜ್ಯದ ಉದ್ದಗಲಕ್ಕೂ ಯಮಸ್ವರೂಪಿ ಗಂಡಾ ಗುಂಡಿಗಳದ್ದೇ ಹಾವಳಿಯಾಗಿದೆ. ಇಡೀ ರಾಜ್ಯದಲ್ಲಿ ರಸ್ತೆಗಳು ಹದಗೆಟ್ಟಿವೆ. ಜನಸಾಮಾನ್ಯರು, ವಾಹನ ಸವಾರರು ದಿನನಿತ್ಯ ಛೀ ಥೂ ಎಂದು ಸರ್ಕಾರಕ್ಕೆ ಉಗಿಯುತ್ತಿದ್ದರೂ ನಿಮ್ಮ ದಪ್ಪ ಚರ್ಮದ ಸರ್ಕಾರ ಮಾತ್ರ ಪವರ್ ಶೇರಿಂಗ್, ಬ್ರೇಕ್ ಫಾಸ್ಟ್ ಮೀಟಿಂಗ್ ಅಂತ ಸ್ವಾರ್ಥ ಸಾಧನೆಯಲ್ಲೇ ಮುಳುಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.



