*ಕಬ್ಬಿನ ಟ್ರ್ಯಾಕ್ಟರ್ ಗೆ ಕಾರ್ ಡಿಕ್ಕಿ: ನಾಲ್ವರು ಯುವಕರು ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ವಿಶ್ವನಾಥ್ ಕಂಬಾರ್ (17), ಪ್ರವೀಣ್ ಶೇಡಬಾಳ್ (22), ಗಣೇಶ ಅಳ್ಳಿಮಟ್ಟಿ (20), ಪ್ರಜ್ವಲ್ ಶೇಡಬಾಳ್ (17) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಕೂಡ ಸಿದ್ದಾಪುರ ಗ್ರಾಮದವರು ಎಂದು ಹೇಳಲಾಗಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ದಾಪುರದ ಬಳಿಯ ಬಾಗಲಕೋಟೆ-ವಿಜಯಪುರ ಹೆದ್ದಾರಿಯ ರಸ್ತೆ ಪಕ್ಕದಲ್ಲಿ ಕಬ್ಬು ತುಂಬಿದ್ದ ಲಾರಿಯನ್ನು ನಿಲ್ಲಿಸಲಾಗಿತ್ತು. ಇದೇ ವೇಳೆ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಬಂದಿದ್ದಾರೆ.
ಮಂಗಳವಾರ ರಾತ್ರಿಯ ವೇಳೆ ವಾಪಸ್ ತಮ್ಮ ಊರಿಗೆ ಬರುವ ವೇಳೆ ರಸ್ತೆ ಪಕ್ಕ ಕಬ್ಬು ತುಂಬಿದ್ದ ಟ್ಯಾಕ್ಟರ್ ಅನ್ನು ಗಮನಿಸದ ಪರಿಣಾಮ ಈ ಅವಘಡ ಸಂಭವಿಸಿದೆ. ಕಾರು ಟ್ರ್ಯಾಕ್ಟರ್ ಸಮೀಪ ಬರುತ್ತಿದ್ದಂತೆ ಗಮನಿಸಿದ ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ್ದಾನೆ. ಆದರೆ ಅಷ್ಟರಲ್ಲಿ ಕಾರು ನೇರವಾಗಿ ಟ್ಯಾಕ್ಟರ್ ನ ಹಿಂಬಾಗಕ್ಕೆ ಗುದ್ದಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.




