Latest

ಬಾಂಗ್ಲಾ ವಲಸಿಗರಿಗೆ ಪೌರತ್ವ ಪ್ರಮಾಣ ಪತ್ರ ವಿತರಣೆಗೆ ದಿನಾಂಕ ನಿಗದಿಗೊಳಿಸುವಂತೆ ಸಂಸದ ಕರಡಿ ಪತ್ರ

ಪ್ರಗತಿವಾಹಿನಿ ಸುದ್ದಿ, ರಾಯಚೂರು:  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಒಂದೆಡೆ ಪ್ರತಿಭಟನೆಗಳು ಮುಂದುವರೆದಿರುವಾಗಲೇ ಕೊಪ್ಪಳ ಸಂಸದ ಸಂಗಣ್ಣ ಕರಡಿ, ರಾಯಚೂರಿನ ಸಿಂಧನೂರು ತಾಲೂಕಿನಲ್ಲಿರುವ ಬಾಂಗ್ಲಾ ವಲಸಿಗರಿಗೆ ಪೌರತ್ವ ಪ್ರಮಾಣ ಪತ್ರ ವಿತರಣೆ ಮಾಡಬೇಕು ಎಂದು ಪತ್ರ ಬರೆದಿದ್ದಾರೆ.

ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದಿರುವ ಸಂಗಣ್ಣ ಕರಡಿ, ಬಾಂಗ್ಲಾ ವಲಸಿಗರಿಗೆ ಪೌರತ್ವ ಪ್ರಮಾಣ ಪತ್ರ ವಿತರಣಾ ಸಮಾರಂಭಕ್ಕೆ ದಿನಾಂಕ ನಿಗದಿ ಮಾಡುವಂತೆ ಕೋರಿದ್ದಾರೆ.

ಸಿಂಧನೂರು ತಾಲೂಕಿನಲ್ಲಿರುವ ಆರ್.ಎಚ್ ಕ್ಯಾಂಪ್ 1ರಿಂದ 5ರಲ್ಲಿ ಸುಮಾರು 20 ಸಾವಿರ ಜನ ಪೌರತ್ವ ಪಡೆಯುವ ಫಲಾನುಭವಿಗಳು ಇದ್ದಾರೆ. ಆದ್ದರಿಂದ ಸಿಂಧನೂರಿನಲ್ಲಿ 15 ಜನವರಿ 2020ರೊಳಗೆ ಪೌರತ್ವ ಪ್ರಮಾಣ ಪತ್ರ ವಿತರಣಾ ಸಮಾರಂಭ ನಡೆಸಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅಥವಾ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದಿನಾಂಕ ನಿಗದಿಪಡಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಅಂತ ಪತ್ರದ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಂಗಣ್ಣ ಕರಡಿ ಕೋರಿದ್ದಾರೆ.

1970-71ರಲ್ಲಿ ಬಂದ ಬಾಂಗ್ಲಾ ನಿವಾಸಿಗಳು ಈ ಕ್ಯಾಂಪ್‍ಗಳಲ್ಲಿ ವಾಸಿಸುತ್ತಿದ್ದಾರೆ. ಭಾರತ ಬಾಂಗ್ಲಾ ವಿಭಜನೆ ಬಳಿಕ ಬಂದವರಿಗೆ ನಿರಾಶ್ರಿತ ಯೋಜನೆಯಡಿ ಆಗಿನ ಕೇಂದ್ರ ಸರ್ಕಾರ ಜಮೀನು, ನಿವೇಶನ ಸೇರಿ ಎಲ್ಲಾ ಸೌಲಭ್ಯಗಳನ್ನು ನೀಡಿತ್ತು. ಯೋಜನೆ ಮುಗಿದ ಬಳಿಕ ಬಂದ ವಲಸಿಗರು ಇದುವರೆಗೆ ಅಕ್ರಮವಾಗಿಯೇ ವಾಸಮಾಡುತ್ತಿದ್ದರು. ಈಗ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಇಲ್ಲಿನ ಕ್ಯಾಂಪ್‍ಗಳಲ್ಲಿ ವಾಸಿಸುವ ಎಲ್ಲಾ ಬಾಂಗ್ಲಾ ವಲಸಿಗರು ಭಾರತ ಪೌರತ್ವ ಪಡೆಯುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button