*ರೈತರಿಗೆ ಗುಡ್ ನ್ಯೂಸ್: 3.20 ಲಕ್ಷ ರೈತರಿಗೆ 1,250 ಕೋಟಿ ರೂ. ವೆಚ್ಚದ ಕೃಷಿ ಸಲಕರಣೆಗಳ ವಿತರಣೆ*

ಪ್ರಗತಿವಾಹಿನಿ ಸುದ್ದಿ: ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದ 3.20 ಲಕ್ಷ ರೈತರಿಗೆ ಅಂದಾಜು 1,250 ಕೋಟಿ ರೂ. ಮೊತ್ತದ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ವೇಳೆ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ನೀಲಪ್ಪ ಶಿವಣ್ಣನವರ್ ಅವರ ಪ್ರಶ್ನೆಗೆ ಉತ್ತರಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚೆಗೆ ಕೃಷಿ ಕೂಲಿ ಕಾರ್ಮಿಕರ ಕೊರತೆ ಕಂಡುಬರುತ್ತಿದೆ. ಹೀಗಾಗಿ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಯಂತ್ರೋಪಕರಣಗಳನ್ನು ಬಳಸುವ ಕಡೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಸರ್ಕಾರವೂ ರೈತರ ಬೇಡಿಕೆಗಳಿಗೆ ಅನುಗುಣವಾಗಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸುವ ಕೆಲಸಕ್ಕೆ ಆದ್ಯತೆ ನೀಡಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದ 3.20 ಲಕ್ಷ ರೈತರಿಗೆ ಅಂದಾಜು 1,250 ಕೋಟಿ ರೂ. ಮೊತ್ತದ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ಅಲ್ಲದೆ ಹೈಟೆಕ್ ಹಾರ್ವೆಸ್ಟ್ ಹಬ್ ಕಾರ್ಯಕ್ರಮದಡಿ 127 ಕೋಟಿ ರೂ. ವೆಚ್ಚದಲ್ಲಿ 348 ರೈತರಿಗೆ ಉಪಯುಕ್ತ ಕೃಷಿ ಯಂತ್ರೋಪಕರಣ ವಿತರಿಸಲಾಗಿದೆ ಎಂದರು.
ಪ್ರಸಕ್ತ ವರ್ಷ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಡಿ ಒದಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಸೇರಿ ಒಟ್ಟು 428.82 ಕೋಟಿ ರೂ. ಗಳ ಅನುದಾನ ಮೀಸಲಿಟ್ಟಿದ್ದು, ಈಗಾಗಲೆ 319.57 ಕೋಟಿ ರೂ. ಅನುದಾನ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಈವರೆಗೆ 69722 ರೈತರಿಗೆ 271.71 ಕೋಟಿ ರೂ. ಗಳ ಸಹಾಯಧನ ಒದಗಿಸಲಾಗಿದೆ. ಕೃಷಿ ಯಂತ್ರೋಪಕರಣಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಕೇಂದ್ರ ಸರ್ಕಾರಕ್ಕೂ ಹೆಚ್ಚಿನ ಅನುದಾನ ಒದಗಿಸಲು ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.




