ಪ್ರಗತಿವಾಹಿನಿ ಸುದ್ದಿ, ನವದೆಹಲಿ -ಭಾರಿ ವಿವಾದಕ್ಕೆ ಕಾರಣವಾಗಿದ್ದ ಪ್ರವಾಹ ಪರಿಹಾರ ನಿಧಿ ಅಂತೂ ಕೇಂದ್ರ ಸರಕಾರದಿಂದ ಬಿಡುಗಡೆಯಾಗಿದೆ. ಕೇಂದ್ರ ಸರಕಾರ ಕರ್ನಾಟಕಕ್ಕೆ 1869.85 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ಪ್ರವಾಹದಿಂದಾಗಿ 50 ಸಾವಿರ ಕೋಟಿ ರೂ.ಗಳಷ್ಟು ಭಾರಿ ನಷ್ಟ ಉಂಟಾಗಿತ್ತು. ಆದರೆ ಕೇಂದ್ರ ಸರಕಾರ ತಕ್ಷಣಕ್ಕೆ ಒಂದು ಪೈಸೆಯನ್ನೂ ನೀಡಿರಲಿಲ್ಲ. ತಿಂಗಳ ನಂತರ 1200 ಕೋಟಿ ರೂ. ಬಿಡುಗಡೆ ಮಾಡಿತ್ತು. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿತ್ತು.
ಕಳೆದವಾರ ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಸರಕಾರ ಪ್ರವಾಹ ಪರಿಹಾರ ನಿಧಿ ಬಿಡುಗಡೆ ಮಾಡದಿರುವ ಬಗ್ಗೆ ಪ್ರಧಾನಿ ಇದ್ದ ವೇದಿಕೆಯಲ್ಲೇ ಪ್ರಸ್ತಾಪಿಸಿ ಅಸಮಾಧಾನ ತೋಡಿಕೊಂಡಿದ್ದರು. ಎರಡೂ ಕೈಗಳನ್ನು ಜೋಡಿಸಿ ಪ್ರಾರ್ಥಿಸುತ್ತೇನೆ, ಹಣ ಬಿಡುಗಡೆ ಮಾಡಿ ಎಂದು ಬಿಡುಕೊಂಡಿದ್ದರು.
ಈ ಪ್ರಾರ್ಥನೆಯ ಫಲವೋ ಎನ್ನುವಂತೆ ಇದೀಗ ಕೇಂದ್ರ ಸರಕಾರ ವಿವಿಧ ರಾಜ್ಯಗಳಿಗೆ ಪ್ರವಾಹ ಪರಿಹಾರ ನಿಧಿ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಹಣ ಬಿಡುಗಡೆಗೆ ನಿರ್ಧರಿಸಲಾಗಿದೆ.
ಒಟ್ಟೂ 5,908 ಕೋಟಿ ರೂ. ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಕರ್ನಾಟಕಕ್ಕೆ 1869.85 ಕೋಟಿ ರೂ.. ಮಧ್ಯಪ್ರದೇಶಕ್ಕೆ 1749.73 ಕೋಟಿ ರೂ., ಮಹಾರಾಷ್ಟ್ರಕ್ಕೆ 956.93 ಕೋಟಿ ರೂ., ಅಸ್ಸಾಂಗೆ 616.63 ಕೋಟಿ ರೂ, ಹಿಮಾಚಲ ಪ್ರದೇಶಕ್ಕೆ 284.93 ಕೋಟಿ ರೂ, ತ್ರಿಪುರಾಕ್ಕೆ 63.32 ಕೋಟಿ ರೂ ಮತ್ತು ಉತ್ತರ ಪ್ರದೇಶಕ್ಕೆ 367.17 ಕೋಟಿ ರೂ. ಪ್ರವಾಹ ಪರಿಹಾರ ನಿಧಿಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ.
ಮೋದಿ ಎದುರೇ ಧ್ವನಿ ಎತ್ತುವ ಧೈರ್ಯ ತೋರಿದ ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ