*ಪೊಲೀಸ್ ಇಲಾಖೆಯ ನೂತನ ಶೂಟಿಂಗ್ ತರಬೇತಿ ಕೇಂದ್ರ ಉದ್ಘಾಟಿಸಿದ ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಮಕನಮರಡಿ ಕ್ಷೇತ್ರದಲ್ಲಿ ಪೊಲೀಸ್ ಇಲಾಖೆಯ ಶೂಟಿಂಗ್ ತರಬೇತಿ ಕೇಂದ್ರ ಸ್ಥಾಪನೆಯಾಗಿರುವುದು ಸಂತಸ ತಂದಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಕ್ಷೇತ್ರದ ಪಾಶ್ಚಾಪೂರ ಗ್ರಾಮದ ಸಮೀಪದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ನೂತನ ಶೂಟಿಂಗ್ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಪೊಲೀಸ್ ಇಲಾಖೆಯ ಶೂಟಿಂಗ್ ತರಬೇತಿ ಕೇಂದ್ರಗಳು ಬೇರೆ ಜಿಲ್ಲೆಯಲ್ಲಿ ಸ್ಥಾಪನೆಯಾಗಿವೆ. ಬೆಳಗಾವಿಯಲ್ಲಿ ಶೂಟಿಂಗ್ ತರಬೇತಿ ಕೇಂದ್ರದ ಅಗತ್ಯತೆ ಇತ್ತು. ಈ ಹೆಂದೆ ಆರ್ಮಿಗೆ ಸಂಬಂಧಿಸಿದ ಶೂಟಿಂಗ್ ತರಬೇತಿ ಕೇಂದ್ರವನ್ನು ಪೊಲೀಸ್ ಇಲಾಖೆ ಬಳಕೆ ಮಾಡುತ್ತಿತ್ತು. ಈ ನೂತನ ಶೂಟಿಂಗ್ ತರಬೇತಿ ಕೇಂದ್ರದ ಸ್ಥಾಪನೆಯಿಂದ ಅವರು ಸ್ವಾತಂತ್ರ್ಯವಾಗಿ ಶೂಟಿಂಗ್ ತರಬೇತಿ ಪಡೆಯಬಹುದು ಎಂದರು.
ಪಾಶ್ಚಾಪೂರ ಗ್ರಾಮದಲ್ಲಿ ಸ್ಥಾಪನೆಯಾದ ಪೊಲೀಸ್ ಇಲಾಖೆಯ ಹೊಸ ಶೂಟಿಂಗ್ ತರಬೇತಿ ಕೇಂದ್ರವು ಪೊಲೀಸ್ ತರಬೇತಿಗೆ ಮಹತ್ವದ ಕೊಡುಗೆಯಾಗಿದ್ದು, ಇದು ಪೊಲೀಸ್ ಇಲಾಖೆಯ ತರಬೇತಿ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಡಾ. ಭೀಮಾಶಂಕರ ಎಸ್. ಗುಳೇದ್, ಹೆಚ್ಚುವರಿ ಪೋಲಿಸ್ ಅಧಿಕ್ಷಕರಾದ ಆರ್.ಬಿ. ಬಸರಗಿ, ಅಶೋಕ ಝಂಜರವಾಡ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



