ಪ್ರಗತಿವಾಹಿನಿ ಸುದ್ದಿ; ನವದೆಹಲಿ: 2012, ಡಿ 16ರಂದು ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಗ್ಯಾಂಗ್ ರೇಪ್ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಕೊನೆಗೂ 7 ವರ್ಷಗಳ ಬಳಿಕ ಗಲ್ಲುಶಿಕ್ಷೆ ನಿಗದಿಯಾಗಿದೆ. ಜ.22ರಂದು ಬೆಳಿಗ್ಗೆ 7 ಗಂಟೆಗೆ ಪ್ರಕರಣ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗುವುದು ಎಂದು ದೆಹಲಿ ಪಟಿಯಾಲಾ ಹೌಸ್ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣ ಸಂಬಂಧ ಅಪರಾಧಿಗಳಿಗೆ ಶೀಘ್ರವೇ ಗಲ್ಲುಶಿಕ್ಷೆಯಾಗಬೇಕೆಂದು ಕೋರಿ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸತೀಶ್ ಕುಮಾರ್ ಅರೋರಾ, ಅಪರಾಧಿಗಳಾದ ಅಕ್ಷಯ್, ಮುಖೇಶ್, ವಿನಯ್, ಪವನ್ ಗುಪ್ತಾ ಅವಾರಿಗೆ ಡೆತ್ ವಾರಂಟ್ ಜಾರಿ ಮಾಡಿದ್ದು, ಜ.22ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲುಶಿಕ್ಷೆ ನಿಗದಿಪಡಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ಪ್ರಕರಣದಲ್ಲಿ ಸುಳ್ಳು ಸಾಕ್ಷಿ ಹೇಳಿಸಲಾಗಿದೆ ಎಂದು ಆಕ್ಷೇಪಿಸಿ ಅಪರಾಧಿಗಳಲ್ಲೊಬ್ಬನಾದ ಪವನ್ ಕುಮಾರ್ ಗುಪ್ತಾ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ನಿನ್ನೆ ವಜಾಗೊಳಿಸಿತ್ತು.
2012ರ ಡಿಸೆಂಬರ್ 16ರಂದು ದಕ್ಷಿಣ ದೆಹಲಿಯಲ್ಲಿ ಪ್ಯಾರಾಡೆಕಲ್ ವಿದ್ಯಾರ್ಥಿನಿ ಮೇಲೆ ರಾತ್ರಿ 9ಗಂಟೆ ವೇಳೆಯಲ್ಲಿ ಬಸ್ ನಲ್ಲಿ 6 ಜನ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಆಕೆಯ ಜೊತೆಗಿದ್ದ ಸ್ನೇಹಿತನನ್ನ ಕಟ್ಟಿಹಾಕಿ ಥಳಿಸಿ ಆತನ ಮುಂದೆಯೇ ಕೃತ್ಯವೆಸಗಿದ್ದರು. ಬಳಿಕ ಚಲಿಸುತ್ತಿದ್ದ ಬಸ್ಸಿನಿಂದ ಇಬ್ಬರನ್ನೂ ನಡುರಸ್ತೆಗೆ ಎಸೆದು ಹೋಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು-ಬದುಕಿನ ಜತೆ ಹೋರಾಡಿ ಡಿ.29ರಂದು ಸಾವನ್ನಪ್ಪಿದ್ದಳು. ರಾಮ್ ಸಿಂಗ್, ಅಕ್ಷಯ್, ವಿನಯ್, ಮುಕೇಶ್, ಪವನ್ ಕುಮಾರ್ ಹಾಗೂ ಮತ್ತೋರ್ವ ಅಪರಾಧಿ ಅಪ್ರಾಪ್ತ ಬಾಲಕನಾಗಿದ್ದ. ಇವರಲ್ಲಿ ರಾಮ್ ಸಿಂಗ್ ಎಂಬ ಅಪರಾಧಿ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ