*ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ಕಡೋಲಿಯಲ್ಲಿ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಹೆಸರನ್ನು ಬದಲಾಯಿಸಿರುವ ಮೋದಿ ಸರ್ಕಾರ ಜನರ ಹಕ್ಕುಗಳನ್ನು ಕದಿಯುತ್ತಿದೆ ಎಂದು ಆರೋಪಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ ನಡೆಸಿ, ಕಡೋಲಿ ಗ್ರಾಪಂ ಸೇರಿದಂತೆ ಹುಕ್ಕೇರಿ ತಾಲೂಕಿನ ಮನಗುತ್ತಿ, ದಡ್ಡಿ ಗ್ರಾಪಂಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಪಿಡಿಓ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಡೋಲಿ ಗ್ರಾಪಂ ಹಾಗೂ ಹುಕ್ಕೇರಿ ತಾಲೂಕಿನ ಮನಗುತ್ತಿ, ದಡ್ಡಿ ಗ್ರಾಮಸ್ಥರು ಗ್ರಾಪಂ ಎದುರು ಜಮಾಯಿಸಿದ ಗ್ರಾಮೀಣ ಕೂಲಿ ಕಾರ್ಮಿಕರು ಮತ್ತು ಗ್ರಾಮದ ಹಿರಿಯ ನಾಗರಿಕರು, ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಿಂದ ಮಹಾತ್ಮಗಾಂಧಿ ಹೆಸರನ್ನು ಕೈಬಿಟ್ಟಿರುವ ಕೇಂದ್ರ ಸರ್ಕಾರದ ವಿರುದ ಪ್ರತಿಭಟನೆ ನಡೆಸಲಾಯಿತು.
ಬಡವರ ಬದುಕಿಗೆ ಆಸರೆಯಾಗಿರುವ ಮನರೇಗಾ ಯೋಜನೆಯ ಹೆಸರನ್ನು ಬದಲಾಯಿಸುವ ಮೂಲಕ ಕೇಂದ್ರ ಸರಕಾರ ರಾಜಕೀಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವ ಈ ಮಹತ್ವದ ಯೋಜನೆಗೆ ಯುಪಿಎ ಸರಕಾರ ನೀಡಿದ ಹೆಸರನ್ನು ಅಳಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದ ಪ್ರತಿಭಟನಾಕಾರರು, ಜನರಿಗೆ ಕೆಲಸ ನೀಡಿ, ಅವರುಗಳ ಜೀವನೋಪಾಯಕ್ಕೆ ಅನುಕೂಲ ಮಾಡಿಕೊಟ್ಟಿರುವ ಉದ್ಯೋಗ ಖಾತ್ರಿ ಯೋಜನೆಯನ್ನು ಮೋದಿಸರ್ಕಾರ ಮೊಟಕುಗೊಳಿಸಲುಮುಂದಾಗಿದೆ. ಅಲ್ಲದೆ ಆಯ್ಕೆ ಮಾಡಿದ ಹಳ್ಳಿಗಳಲ್ಲಿ ಮಾತ್ರ ಕೆಲಸ ಮಾಡಬೇಕಿದೆ. ಇದರಿಂದ ಬೇರೆ ಹಳ್ಳಿಗಳಲ್ಲಿ ಯಾವುದೇ ಕೆಲಸ ಮಾಡುವ ಆಗಿಲ್ಲ ಮತ್ತು ಅಲ್ಲಿನ ಜನರಿಗೂ ಕೆಲಸ ಇಲ್ಲದಂತಾಗಲಿದೆ ಎಂದು ಕಳವಳ ಪಡಿಸಿದರು.
ವಿಬಿ ಜೀರಾಮ್ ಜೀ ಯೋಜನೆ ಬಿಲ್ ರದ್ಧು ಮಾಡಿ, ಮನರೇಗಾ ಯೋಜನೆ ಜಾರಿಗೆಯಲ್ಲಿ ಇರುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಬಡವರ ಯೋಜನೆಗೆ ಯಾವುದೇ ಸರ್ಕಾರಗಳು ಕೈ ಹಾಕಬಾರದು. ಮನರೇಗಾ ಯೋಜನೆಯಿಂದ ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ಸದೃಡರಾಗಿದ್ದಾರೆ. 100 ದಿನದ ಕೂಲಿ “ಉದ್ಯೋಗ ಖಾತ್ರಿ” ಗ್ರಾಮೀಣ ಭಾಗದ ಕೂಲಿ ಆಶ್ರಿತ ಕುಟುಂಬಗಳಿಗೆ ಜೀವನಾಡಿಯಾಗಿದೆ. ಸರ್ಕಾರ ಬೇರೆ-ಬೇರೆ ಯೋಜನೆಗಳು ಜಾರಿ ಮಾಡಿದರೆ ಬಡವರಿಗೆ ಹೊರೆ ಮಾಡುತ್ತಿವೆ. ಕೇಂದ್ರ ಪಾಲು 60% ಭಾಗ ರಾಜ್ಯ ಸರಕಾರಗಳ ಪಾಲು 40 % ಭಾಗ ಹಂಚಿಕೆ ಮಾಡಿದೆ. ಇಷ್ಟು ಮೊತ್ತದ ಹಣವನ್ನು ಹೊಂದಿಸಲು ಯಾವ ರಾಜ್ಯ ಸರ್ಕಾರಗಳಿಗೂ ಸಾಧ್ಯವಿಲ್ಲದ ಕಾರಣ ರಾಜ್ಯಗಳ ತೆರಿಗೆಯ ಬಹುಪಾಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ಭಾರ ಹಾಕಿದರೆ ದುಡಿಯುವ ಕೈಗಳಿಗೆ ಕೆಲಸ ಮತ್ತು ಕೂಲಿ ಸಿಗಲು ಸಾಧ್ಯವೇ ಇಲ್ಲ, ಕೇಂದ್ರ ಸರ್ಕಾರ ಹೊಸ ಬಿಲ್ ಪಾಸ್ ಮಾಡಿರುವುದನ್ನು ಖಂಡಿಸುತ್ತೆವೆ ಎಂದರು.
ಈ ಸಂದರ್ಭದಲ್ಲಿ ಕಡೋಲಿ ಗ್ರಾಪಂ ಪಿಡಿಓ ಕೃಷ್ಣಾಭಾವಿ ಬಂಡಾರಿ, ಅನಿತಾ ಬೆಳಂಗಾವಕರ್, ವಂದನಾ ಕುಟ್ಟರೇ, ಪುಪ್ಪಾ ಮಜಗಾವಿ, ಅಶ್ವಿನಿ ಪಾಟೀಲ್ , ಪ್ರಭಾವತಿ ಬಿರ್ಜೆ , ಲಕ್ಷ್ಮಿ ಕುಟರೆ, ಪ್ರಭಾ ಗೌಡವೆ, ಅನಿತಾ ಪೌವಲೇ, ಲಕ್ಷ್ಮಿ ಪಾವಲೆ, ರೇಣುಕಾ ಗಾವಡೆ, ಶಾಂತಾ ಗಾವಡೆ, ನಿತಾ ಚೌಗಲೆ, ಮನಿಶಾ ಕಾಲೇಕರ್, ಮಾಲು ಮುತ್ತಗೇಕರ್, ಕವಿತಾ ಪಾಟೀಲ್, ಶೋಭಾ ಪಾಟೀಲ್, ಕಲ್ಪನಾ ನರೋಟಿ, ಲಕ್ಷ್ಮೀ ಅಂಕಿ, ಸುನೀತಾ ನಿರವಾಣಿ ಹಾಗೂ ಮಹಾದೇವಿ ಪಾಟೀಲ್, ಲಕ್ಷ್ಮೀ ಬಾಳೆಕುಂದ್ರಿ, ರೇಣುಕಾ ಸದಾವರ್, ಹಾಗೂ ಇತರರು ಇದ್ದರು.




