*ಬೆಳಗಾವಿ: ಸಂಚಾರಿ ಧರ್ಮ ಜಾಗೃತಿ ರಥಕ್ಕೆ ಚಾಲನೆ*

ಪ್ರಗತಿವಾಹಿನಿ ಸುದ್ದಿ: ಭಾರತ ದೇಶ ಧರ್ಮ ಪ್ರಧಾನವಾಗಿರುವ ದೇಶ. ಇಲ್ಲಿ ಬಾಳಿ ಬದುಕುವ ಮನಿಷ್ಯನಿಗೆ ಧರ್ಮವೇ ಜೀವಾಳವಾಗಿದೆ ಎಂದು ವಿಶ್ವಾಸ ಇಟ್ಟುಕೊಂಡು ಬಂದ ದೇಶ. ಇಲ್ಲಿ ಧರ್ಮ ಜಾಗೃತಿ ಆಗುವುದು ಅವಶ್ಯಕ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಸ್ವಾಮೀಜಿ ಕರೆ ನೀಡಿದರು.
ಮಂಗಳವಾರ ಯಡೂರು ವೀರಭದ್ರೇಶ್ವರ ದೇವಸ್ಥಾನದ ಮಹಾಕುಂಭಾಭಿಷೇಕ, ಲಕ್ಷ ದಿಪೋತ್ಸವ, ಕೃಷ್ಣಾರತಿ ಮತ್ತು ಪುರಂತರ ಮಹಾಮೇಳ ಅಂಗವಾಗಿ ಭದ್ರಕಾಳಿ ವೀರಭದ್ರೇಶ್ವರ ಕಲ್ಯಾಣ ಮಹೋತ್ಸವ ಹಾಗೂ ಶ್ರೀ ಜಗದ್ಗುರುಗಳ ಸಂಚಾರಿ ಧರ್ಮ ಜಾಗೃತಿ ರಥಕ್ಕೆ ಚಾಲನೆ ನೀಡಿ, ಚನ್ನಮ್ಮ ಪತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದರು. ದೇಶದಲ್ಲಿ ಎಲ್ಲರೂ ತಮ್ಮ ತಮ್ಮ ಧರ್ಮವನ್ನು ಅನುಸರಿಸಬೇಕು. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣತೆಯ ಮೂಲಕ ಪ್ರತಿಯೊಬ್ಬರು ಸಹಬಾಳ್ವೆ ನಡೆಸುವುದರ ಜೊತೆಗೆ ತಮ್ಮ ಧರ್ಮದ ಆಚರಣೆಯನ್ನು ಶೃದ್ಧೆಯಿಂದ ಆಚರಿಸಿ ಧರ್ಮದ ದಾರಿಯಲ್ಲಿ ಸಾಗಬೇಕು ಎನ್ನುವ ಉದ್ದೇಶದಿಂದ ಧರ್ಮ ಜಾಗೃತಿಯನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀ ಕ್ಷೇತ್ರ ಯಡೂರ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿದೆ. ಕಳೆದ 9 ವರ್ಷಗಳಿಂದ ಜೀರ್ಣೋದ್ಧಾರ ಕಾರ್ಯಗಳು ನಡೆದು ರಾಜಗೋಪುರಗಳು ನಿರ್ಮಾಣವಾಗಿ ಸಾಕಷ್ಟು ವಿಶಾಲವಾದ, ವೈಭವವಿರುವ ದೇವಸ್ಥಾನ ನಿರ್ಮಾಣವಾಗಿವೆ. ಅದರ ಉದ್ಘಾಟನೆಯನ್ನು ಮಾ.1 ರಿಂದ 6ರ ವರೆಗೆ ಹಮ್ಮಿಕೊಳ್ಳಲಾಗಿದೆ. ಅದಕ್ಕೂ ಮುನ್ನ ಜಿಲ್ಲೆಯಾದ್ಯಂತ ಭಕ್ತರ ಪ್ರತಿಯೊಬ್ಬರ ಊರಿನಲ್ಲಿಯೂ ಧರ್ಮ ಜಾಗೃತಿಗಾಗಿ ಎಲ್ಲ ಭಕ್ತರನ್ನು ಆಹ್ವಾನಿಸಲು ಧರ್ಮ ಜಾಗೃತಿ ಸದ್ಭಾವನಾ ಯಾತ್ರೆಯನ್ನು ಆರಂಭಿಸಲಾಗಿದೆ ಎಂದರು.
ಧರ್ಮ ಎಂದರೆ ಒಗ್ಗಟ್ಟಾಗಿ ಪರಸ್ಪರ ಪ್ರೀತಿಯಿಂದ ಹೋಗಬೇಕು. ಗುರು ವೀರಕ್ತರು ಒಂದಾಗಿ ಎಲ್ಲ ಮಠಾಧೀಶರು ಧರ್ಮ ಜಾಗೃತಿ ಯಾತ್ರೆಗೆ ಚಾಲನೆ ನೀಡಿದ್ದೇವೆ ಎಂದರು.
ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ ಮಾತನಾಡಿ, ಶ್ರೀಶೈಲ ಜಗದ್ಗುರುಗಳ ನೇತೃತ್ವದಲ್ಲಿ ಧರ್ಮ ಜಾಗೃತಿ ಯಾತ್ರೆ ಆರಂಭವಾಗಿದೆ. ಜಾತಿ, ಮತ,ಪಂಥಗಳನ್ನು ಹೊಗಲಾಡಿಸಿ ನಾವೆಲ್ಲರೂ ಒಂದು ಎಂಬ ಭಾವನೆ ಮೂಡಬೇಕು. ಜನರಲ್ಲಿರುವ ವ್ಯಸನಗಳನ್ನು ದೂರ ಮಾಡಿ ಜನರನ್ನು ಧರ್ಮದ ಕಡೆಗೆ ಕೊಂಡೊಯ್ಯುವುದು ಎಲ್ಲರ ಆಶಯವಾಗಿದೆ ಎಂದರು.
ಶಾಸಕರಾದ ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ, ಉದ್ಯಮಿ ಬಸವಪ್ರಸಾದ ಜೋಲ್ಲೆ, ಕಟಕೋಳ ಎಂ ಚಂದರಗಿಯ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುಕ್ತಿಮಠದ ಶ್ರೀ ಶಿವಸಿದ್ದ ಸೋಮೇಶ್ವರ ಸ್ವಾಮೀಜಿ, ನೂಲ ಸುರಗೀಶ್ವರಮಠದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



