Belagavi NewsBelgaum NewsKarnataka NewsLatestPolitics

*ಸೈನ್ಯ ಸೇರುವ ಯುವಕರಿಗೆ ಉಚಿತ ತರಬೇತಿಗೆ ಫೌಂಡೇಶನ್ ನಿಂದ ಬೃಹತ್ ಯೋಜನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಭಾರತೀಯ ಸೈನ್ಯ ಸೇರಲಿಚ್ಛಿಸುವ ಯುವಕರಿಗೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಉಚಿತ ತರಬೇತಿ ಸೇರಿದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಕ್ಷೇತ್ರದ ಕುದ್ರೆಮನಿ ಗ್ರಾಮದಲ್ಲಿ ಬುಧವಾರ ಹಳದಿ- ಕುಂಕುಮ ಕಾರ್ಯಕ್ರಮ ನಡೆಸಿ, ಭಾರತೀಯ ಸೇನೆಗೆ ಆಯ್ಕೆಯಾಗಿರುವ ಗ್ರಾಮದ ಇಬ್ಬರು ಯುವತಿಯರು ಸೇರಿದಂತೆ ಒಟ್ಟು 9 ಜನರನ್ನು ಸನ್ಮಾನಿಸಿ ಮಾತನಾಡಿದರು. ನಮ್ಮ ಮಕ್ಕಳು ಇಲೆಕ್ಟ್ರಿಷಿಯನ್, ಪೇಂಟರ್, ಗ್ಯಾರೇಜ್‌ ಕೆಲಸ ಇವುಗಳಲ್ಲೇ ಎಷ್ಟು ವರ್ಷ ಮುಂದುವರಿಯುವುದು? ಇವರೂ ದೊಡ್ಡ ದೊಡ್ಡ ಹುದ್ದೆಗೆ ಹೋಗುವುದು ಬೇಡವೇ? ದೊಡ್ಡ ಅಧಿಕಾರಿಗಳಾಗುವುದು ಬೇಡವೇ ಎಂದು ಪ್ರಶ್ನಿಸಿದ ಸಚಿವರು, ಈ ಬಾರಿ 9 ಯುವಕರನ್ನು ಸನ್ಮಾನಿಸಿದ್ದೇನೆ. ಮುಂದಿನ ವರ್ಷ ಇದು ನೂರು ಆಗಬೇಕು. ಈಗ ಆಯ್ಕೆಯಾಗಿರುವ ಯುವಕ, ಯುವತಿಯರು ಇತರರಿಗೆ ಮಾದರಿಯಾಗಬೇಕು ಎಂದರು.


ಬೆಳಗುಂದಿಯಲ್ಲಿ ಕ್ರೀಡಾಂಗಣ ನಿರ್ಮಿಸಿ, ಭಾರತೀಯ ಸೈನ್ಯ ಸೇರಲು ಇಚ್ಛಿಸುವ ಕ್ಷೇತ್ರದ ಯುವಕರಿಗೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಉಚಿತ ತರಬೇತಿ ನೀಡಲಾಗುವುದು. ಮಕ್ಕಳ ಭವಿಷ್ಯಕ್ಕಾಗಿ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ಪಾಲಕರು ಕೂಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರ ಭವಿಷ್ಯ ರೂಪಿಸಬೇಕು ಎಂದು ಸಚಿವರು ತಿಳಿಸಿದರು.

Home add -Advt

ಗ್ರಾಮದಲ್ಲಿ ದೇವಸ್ಥಾನಗಳ ನಿರ್ಮಾಣ ಸೇರಿದಂತೆ ಹಲವು ಕೋಟಿ ರೂ. ಗಳ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮದ ವ್ಯಕ್ತಿಯೊಬ್ಬರಿಗೆ ಅನಾರೋಗ್ಯ ಉಂಟಾದಾಗ ಸುಮಾರು 20 ಲಕ್ಷ ರೂ. ವೆಚ್ಚದ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಿಕೊಡಲಾಗಿದೆ. ನಾನು ಬೇರೆಯವರಂತೆ ಕೇವಲ ಧರ್ಮದ ಹೆಸರನ್ನು ಹೇಳುತ್ತ ಕುಳಿತುಕೊಳ್ಳದೆ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದೇನೆ. ನಿಮ್ಮೆಲ್ಲರ ಸಹಕಾರ ನಿರಂತರವಾಗಿರಲಿ ಎಂದು ಹೇಳಿದರು.


ಇದೇ ವೇಳೆ ಕರಾಟೆಯಲ್ಲಿ ವಿವಿಧ ಪ್ರಶಸ್ತಿಗಳನ್ನು ಪಡೆದ ಮಕ್ಕಳನ್ನು ಸಹ ಸಚಿವರು ಸನ್ಮಾನಿಸಿದರು. ನಂತರ ಗ್ರಾಮದ ನಾಯಕ ಗಲ್ಲಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷರಾದ ಯುವರಾಜ ಕದಂ, ಬಾಳು ದೇಸೂರಕರ್, ವಿನಾಯಕ ಪಾಟೀಲ, ದೀಪಕ್ ಪಾಟೀಲ, ಅರುಣ ದೇವನ್, ವೈಜನಾಥ್ ರಾಜಗೋಳ್ಕರ್, ವಿಮಲ ಸಾಕರೆ, ಶುಭಾಂಗಿ ರಾಜಗೋಳ್ಕರ್, ಪಿಡಿಒ ಸುಮಿತ್ರಾ ಮಿರ್ಜಿ, ಲತಾ ಶಿವಣಗೇಕರ್, ಶಂಕರ ಪಾಟೀಲ, ಪ್ರಕಾಶ್ ಯರೋಳಕರ್, ವೈಶಾಲಿ ಕಾಂಡೇಕರ್ ಹಾಗೂ ಗ್ರಾಮದ ಪ್ರಮುಖರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Back to top button