
ಸರ್ಕಾರದ ಮುಂದಿನ ನಡೆಯೇನು?
ಪ್ರಗತಿವಾಹಿನಿ ಸುದ್ದಿ: ನಾಳೆ ಜನವರಿ 22ರಿಂದ ಜನವರಿ 31ವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲು ನಿರಾಕರಿಸಿದ್ದಾರೆ.
ತಮಿಳುನಾಡಿನ ಬಳಿಕ ಇದೀಗ ಕರ್ನಾಟಕದಲ್ಲಿಯೂ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ನಿರಾಕರಿಸಿರುವ ಘಟನೆ ನಡೆದಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಶಾಕ್ ಆಗಿದೆ.
ರಾಜ್ಯಪಾಲ ಗೆಹ್ಲೋಟ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ನಿರಾಕರಿಸಿರುವುದು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.
ಸಂವಿಧಾನದ ಆರ್ಟಿಕಲ್ 176(1)ರ ಪ್ರಕಾರ ರಾಜ್ಯಪಾಲರ ಭಾಷಣ ಕಡ್ಡಾಯ. ಸರ್ಕಾರ ಸಿದ್ಧಪಡಿಸಿದ ಭಾಷಣ ಓದುವುದು ರಾಜ್ಯಪಾಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ ಒಂದು ವೇಳೆ ನಾಳಿನ ವಿಶೇಷ ಅಧಿವೇಶನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬಾರದಿದ್ದರೆ ಕಾನೂನು ಹೋರಾಟಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ವರ್ಷದ ಮೊದಲ ಅಧಿವೇಶನವನ್ನು ರಾಜ್ಯಪಾಲರು ಆರಂಭಿಸಬೇಕು. ಆದರೆ ಗವರ್ನರ್ ನಡೆ ನಾಳೆಯಿಂದ ಅಧಿವೇಶನ ಆರಂಭವಾಗಲಿದೆಯೇ? ಎಂಬ ಕುತೂಹಲ ಕೆರಳಿಸಿದೆ.
ಈ ನಡುವೆ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯಪಾಲರಿಗೆ ಸಾಂವಿಧಾನಿಕ ಹುದ್ದೆಯ ಸ್ಥಾನಮಾನಗಳ ಬಗ್ಗೆ ಮಾಹಿತಿ ನೀಡಿದೆ. ನಾಳೆ ರಾಜ್ಯಪಾಲರು ಅಧಿವೇಶನಕ್ಕೆ ಆಗಮಿಸಿ ಭಾಷಣ ಮಾಡಲಿದ್ದಾರೆಯೇ? ವಿಶೇಷ ಅಧಿವೇಶನ ನಾಳೆಯಿಂದ ಆರಂಭವಾಗಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.



