*ಕೆಎಲ್‌ಇ ನಿರ್ದೇಶಕ ಮಂಡಳಿಗೆ ಮೊದಲ ಬಾರಿಗೆ ಮಹಿಳೆಯೊಬ್ಬರ ಪ್ರವೇಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆಎಲ್ಇ ಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ ನಿರ್ದೇಶಕ ಮಂಡಳಿಗೆ ಮಹಿಳೆಯೊಬ್ಬರು ಪ್ರವೇಶಿಸಿದ್ದಾರೆ.
ಡಾ.ಪ್ರಭಾಕರ ಕೋರೆಯವರ ಪುತ್ರಿ ಪ್ರೀತಿ ದೊಡವಾದ ನಿರ್ದೇಶಕ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ. ಪ್ರೀತಿ ಕೋರೆ ಕಳೆದ ಹಲವು ವರ್ಷಗಳಿಂದ ಸಂಸ್ಥೆಯಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಬಂದಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ನಿರ್ದೇಶಕ ಮಂಡಳಿಯಲ್ಲಿ ಸ್ಥಾನ ಪಡೆದಿದ್ದಾರೆ.
ಈ ಬಾರಿ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆಯಾಗಿ ಮತ್ತೊಂದು ಇತಿಹಾಸ ಸೃಷ್ಟಿಯಾಗಿದೆ. ನಾಮಪತ್ರ ಹಿಂಪಡೆಯುವ ಅಂತಿಮ ದಿನವಾಗಿದ್ದ ಗುರುವಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲ ನಿರ್ದೇಶಕ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯಿತು.
ಕಳೆದ 40 ವರ್ಷಗಳಿಂದ ಚೇರಮನ್ ಆಗಿ, ಸಂಸ್ಥೆಯನ್ನು ಉನ್ನತಿಗೆ ಒಯ್ದಿದ್ದ ಡಾ.ಪ್ರಭಾಕರ ಕೋರೆಯವರು ನಾಮಪತ್ರ ಹಿಂದಕ್ಕೆ ಪಡೆಯುವ ಮೂಲಕ ನಿರ್ದೇಶಕ ಮಂಡಳಿಯಿಂದ ಹಿಂದೆ ಸರಿದಿದ್ದಾರೆ.

ಅಧ್ಯಕ್ಷರಾಗಿ ಮಹಾಂತೇಶ ಶಿವಾನಂದ ಕೌಜಲಗಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಸವರಾಜ ಶಿವಲಿಂಗಪ್ಪ ತಟವಟಿ ಸಹ ಮರು ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ನೂತನ ಸದಸ್ಯರಾಗಿ ಅಮಿತ ಪ್ರಭಾಕರ ಕೋರೆ, ಪ್ರವೀಣ ಅಶೋಕ ಬಾಗೇವಾಡಿ, ಪ್ರೀತಿ ಕರಣ ದೊಡವಾಡ, ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ, ಮಲ್ಲಿಕಾರ್ಜುನ ಚನಬಸಪ್ಪ ಕೊಳ್ಳಿ, ವಿಜಯ ಶ್ರೀಶೈಲಪ್ಪ ಮೆಟಗುಡ್, ಜಯಾನಂದ ಊರ್ಫ್ ರಾಜು ಮಹಾದೇವಪ್ಪ ಮುನವಳ್ಳಿ, ಮಂಜುನಾಥ ಶಂಕರಪ್ಪ ಮುನವಳ್ಳಿ, ಬಸವರಾಜ ರುದ್ರಗೌಡ ಪಾಟೀಲ, ವಿಶ್ವನಾಥ ಈರನಗೌಡ ಪಾಟೀಲ, ಯಲ್ಲನಗೌಡ ಶಿವಮೊಗ್ಗೆಪ್ಪ ಪಾಟೀಲ ಹಾಗೂ ಅನೀಲ ವಿಜಯಬಸಪ್ಪ ಪಟ್ಟೇದ ಆಯ್ಕೆಯಾಗಿದ್ದಾರೆ.
ಆದ್ದರಿಂದ 7 ಫೆಬ್ರುವರಿ 2026 ರಂದು ಹುಬ್ಬಳ್ಳಿಯ ಬಿ.ವ್ಹಿ.ಭೂಮರಡ್ಡಿ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಹಾಗೂ ರವಿವಾರ 8ನೇ ಫೆಬ್ರುವರಿ 2026 ರಂದು ಬೆಳಗಾವಿಯ ಲಿಂಗರಾಜ ಮಹಾವಿದ್ಯಾಲಯದ ಆವರಣದಲ್ಲಿ ಸೊಸಾಯಿಟಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕಾಗಿದ್ದ ಮತದಾನವನ್ನು ರದ್ದುಪಡಿಸಲಾಗಿದೆ ಎಂದು ಚುನಾವಣಾಧಿಕಾರಿ ಡಾ.ಎಸ್.ಎಸ್.ಜಲಾಲಪುರೆ ಅವರು ತಿಳಿಸಿದ್ದಾರೆ.



