*ಮನೆಗೆ ಬೆಂಕಿ ಪ್ರಕರಣ: ನಾರಾ ಭರತ್ ರೆಡ್ಡಿ ಕಡೆಯವರೇ ಕಾರಣ ಎಂದ ಜನಾರ್ಧನ ರೆಡ್ಡಿ*

ಪ್ರಗತಿವಾಹಿನಿ ಸುದ್ದಿ: ಶಾಸಕ ಜನಾರ್ದನ ರೆಡ್ಡಿ ಕುಟುಂಬಕ್ಕೆ ಸೇರಿದ ಮಾದರಿ ಮನೆಗೆ ಬೆಂಕಿ ಬಿದ್ದಿದೆ. ಆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಘಟನೆಗೆ ನಾರಾ ಭರತ್ ರೆಡ್ಡಿ ಕಡೆಯವರೇ ಕಾರಣ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
‘ನಮ್ಮ ಮಾಡಲ್ ಹೌಸ್‌ಗೆ ಬೆಂಕಿ ಹಚ್ಚಿರುವುದು ಸಾಮಾನ್ಯ ಘಟನೆ ಅಲ್ಲ. ಇದೊಂದು ರಾಜಕೀಯ ಪ್ರೇರಿತ ಕೃತ್ಯ ಇದರಿಂದ ಕಿಡಿಗೇಡಿಗಳಿಗೆ ಯಾವ ಲಾಭ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಸ್ಪಷ್ಟವಾಗಿ ಹೇಳುತ್ತೇನೆ, ಇದರ ಹಿಂದೆ ಭರತ್ ರೆಡ್ಡಿ ಮತ್ತು ಅವರ ಬೆಂಬಲಿಗರ ಕೈವಾಡ ಇದೆ’ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಮೂರು-ನಾಲ್ಕು ತಿಂಗಳ ಹಿಂದೆಯೇ ಇದೇ ಲೇಔಟ್‌ನಲ್ಲಿ ನಡೆದ ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ. ಆ ಸಂದರ್ಭದಲ್ಲಿ ನಾವು ದೂರು ನೀಡಿದರೂ, ಸರಿಯಾದ ಕ್ರಮ ಕೈಗೊಳ್ಳಲಿಲ್ಲ. ಈಗ ಅದೇ ಗುಂಪು ಮತ್ತೊಂದು ಅಪರಾಧ ಎಸಗಿದೆ’ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ‘ಆಗ ಕಳ್ಳತನ ಪ್ರಕರಣದಲ್ಲಿ ಬಂಧಿಸಿದವರನ್ನು ಭರತ್ ರೆಡ್ಡಿ ಮತ್ತು ಎಎಸ್ಪಿ ರವಿ ಒತ್ತಡದಿಂದ ಬಿಡುಗಡೆ ಮಾಡಲಾಗಿದೆ. ಕಳ್ಳತನ ಮಾಡಿದ್ದವರೇ ಈಗ ನಮ್ಮ ಮಾಡಲ್ ಹೌಸ್‌ಗೆ ಬೆಂಕಿ ಹಚ್ಚಿದ್ದಾರೆ’ ಎಂದು ರೆಡ್ಡಿ ಆರೋಪಿಸಿದ್ದಾರೆ.
ಜನವರಿ 1ರಂದು ನಡೆದಿದ್ದ ಬ್ಯಾನರ್ ಗಲಭೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಬೆಂಕಿ ಹಚ್ಚುವುದಾಗಿ ಹೇಳಿದ್ದರು. ಆ ಹೇಳಿಕೆಯನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎಂಬ ಆಗ್ರಹ ದೂರಿನಲ್ಲಿ ಕೇಳಿ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಪಿ ಮಾತನಾಡಿದ್ದು, ಅಪ್ರಾಪ್ತರು ಸೇರಿ ಒಟ್ಟು 8 ಜನರನು ವಶಕ್ಕೆ ಪಡೆಯಲಾಗಿದೆ. ರೀಲ್ಸ್ ಹಾಗೂ ಫೋಟೋ ಶೂಟ್ ಗಾಗಿ ಅವರು ಅಲ್ಲಿನ ಮನೆಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಈ ಮನೆ ಜನಾರ್ದನ ರೆಡ್ಡಿ ಅವರ ಕುಟುಂಬಕ್ಕೆ ಸೇರಿದ್ದು. ಗಾಜುಗಳು ಪುಡಿಯಾಗಿ ಬಿದ್ದಿವೆ. ಮೊದಲ ಮತ್ತು ಎರಡನೇ ಮಹಡಿಯಲ್ಲಿ ಧೂಳು ತುಂಬಿರುವುದು ಗಮನಿಸಿದಾಗ ತುಂಬಾ ವರ್ಷದಿಂದ ಯಾರು ವಾಸ ಇಲ್ಲ ಎಂಬುದು ಸ್ಪಷ್ಟವಾಗಿದೆ. ಈ ಸ್ಥಳದಲ್ಲಿ ಸಿಸಿಟಿವಿಯಾಗಲಿ ಅಥವಾ ಭದ್ರತಾ ಸಿಬ್ಬಂದಿಯಾಗಲಿ ಇಲ್ಲ. ಜಿ ಸೈಯರ್ ಸಂಸ್ಥೆ ನಿರ್ಮಿಸಿದ ಗೆಟೆಡ್ ಆಸ್ತಿಯಾಗಿದೆ ಎಂದು ಹೇಳಿದ್ದಾರೆ.
ಹುಡುಗರು ಮೊದಲ ಮಹಡಿ ಹಾಗೂ ಮನೆ ಮೇಲಿನ ಭಾಗಕ್ಕೆ ಹೋಗಿ, ಸೂರ್ಯ ಮುಳುಗಡೆಯ ಫೋಟೋ ತೆಗೆದುಕೊಂಡಿದ್ದಾರೆ. ಸಿಗರೇಟ್ ತುಂಡುಗಳು ಮತ್ತು ಬೆಂಕಿ ಪಟ್ಟಣ ಅಲ್ಲಲ್ಲಿ ಬಿದ್ದಿರುವುದು ಕಾಣಸಿಗುತ್ತದೆ.
ಒಬ್ಬ ಅಪ್ರಾಪ್ತ ಗೊತ್ತಿಲ್ಲದೆ ಅಲ್ಲಿರುವ ವಸ್ತುವಿಗೆ ಬೆಂಕಿ ತಾಗಿಸಿದ್ದಾನೆ. ಅದು ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿದೆ. ನಂತರ ನಿಯಂತ್ರಣಕ್ಕೆ ಬಾರದೆ ದೊಡ್ಡ ಪ್ರಮಾಣದ ಅವಘಡ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.


