*ಬೆಳಗಾವಿಯಲ್ಲಿ ನಡೆಯಿತು ದೇಶವನ್ನೇ ಬೆಚ್ಚಿಬೀಳಿಸುವ ದೊಡ್ಡ ರಾಬರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೋವಾ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾದ ಸುಮಾರು 400 ಕೋಟಿ ರೂಪಾಯಿ ನಗದು ತುಂಬಿದ್ದ ಎರಡು ಕಂಟೇನರ್‌ಗಳು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ನಲ್ಲಿ ಲೋಟಿ ಮಾಡಲಾಗಿದೆ ಎಂದು ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಅವರಿಗೆ ಸೇರಿದ ಹಣವೇ ಈ ಕಂಟೇನರ್‌ಗಳಲ್ಲಿ ಸಾಗುತ್ತಿತ್ತು ಎನ್ನಲಾಗಿದ್ದು, ಬೆಳಗಾವಿಯಲ್ಲಿ ನಡೆದ ಈ ಅತಿದೊಡ್ಡ ದರೋಡೆ ಪ್ರಕರಣದಿಂದ ಮಹಾರಾಷ್ಟ್ರದಲ್ಲಿ ತೀವ್ರ ಸಂಚಲನ ಉಂಟಾಗಿದೆ.
ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಪೊಲೀಸರು ಕಂಟೇನರ್‌ಗಳ ಶೋಧಕ್ಕೆ ಇಳಿದಿದ್ದಾರೆ.
ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತನಿಖೆಗೆ ಎಸ್ಐಟಿ ರಚಿಸುವಂತೆ ಆದೇಶ ಹೊರಡಿಸಿದ್ದಾರೆ.
ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ರಣರೋಚಕ ಅಂಶವೂ ಬೆಳಕಿಗೆ ಬಂದಿದೆ. ಕಂಟೇನರ್ ಹೈಜಾಕ್ ಆದ ನಂತರ, ನಾಸಿಕ್ ಮೂಲದ ಸಂದೀಪ್ ಪಾಟೀಲ ಎಂಬುವರನ್ನು ಕಿಶೋರ ಅವರ ಸಹಚರರು ಗನ್ ಪಾಯಿಂಟ್‌ನಲ್ಲಿ ಅಪಹರಿಸಿದ್ದಾರೆ ಎನ್ನಲಾಗಿದೆ.
ಒಂದೂವರೆ ತಿಂಗಳ ಕಾಲ ಅವರನ್ನು ಅಕ್ರಮವಾಗಿ ಬಂಧನದಲ್ಲಿಟ್ಟು, “ಕಂಟೇನರ್ ಹೈಜಾಕ್‌ಗೆ ನೀನೇ ಕಾರಣ” ಎಂದು ಆರೋಪಿಸಿ ಚಿತ್ರಹಿಂಸೆ ನೀಡಲಾಗಿದೆ. 400 ಕೋಟಿ ರೂಪಾಯಿ ಹಣ ಕೊಡದಿದ್ದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ.
ಅಪಹರಣಕಾರರಿಂದ ತಪ್ಪಿಸಿಕೊಂಡ ಸಂದೀಪ್ ಪಾಟೀಲ ಬಳಿಕ ನಾಸಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಅದರ ಆಧಾರದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಬಂಧನಗಳ ಬಳಿಕವೇ ಕಂಟೇನರ್ ಹೈಜಾಕ್ ಪ್ರಕರಣಕ್ಕೆ ತೆರೆ ಬೀಳಲಿದೆ.
ಇದೇ ವೇಳೆ, ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಹಣ ಬಳಕೆಯಾಗುವ ಸಾಧ್ಯತೆ ಇದ್ದಿತೇ ಎಂಬ ದೃಷ್ಟಿಯಲ್ಲೂ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಫಡ್ನವಿಸ್ ಸೂಚನೆ ನೀಡಿದ್ದಾರೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಸತ್ಯಾಂಶ ಹೊರತರುವುದಾಗಿ ಮಹಾರಾಷ್ಟ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಸಂಬಂಧ ಬೆಳಗಾವಿ ಎಸ್ಪಿ ರಾಮರಾಜನ್ ಅವರಿಗೆ ಸಹಕಾರ ಕೋರಿ ಪತ್ರ ರವಾನಿಸಲಾಗಿದ್ದು, ಗೋವಾ ಪೊಲೀಸರ ಸಹಕಾರವನ್ನೂ ಮಹಾರಾಷ್ಟ್ರ ಸರ್ಕಾರ ಕೇಳಿದೆ.



