*ಶೀಘ್ರ ಪರಶುರಾಮ ಪ್ರತಿಮೆ ಪ್ರತಿಷ್ಠಾಪನೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಕಾರ್ಕಳದಲ್ಲಿ ಕಾಂಗ್ರೆಸ್ ಕ್ರೀಡಾಕೂಟ ಉದ್ಘಾಟಿಸಿದ ಸಚಿವರು
ಪ್ರಗತಿವಾಹಿನಿ ಸುದ್ದಿ: ವಿಷ್ಣುವಿನ ಆರನೇ ಅವತಾರ ಎನಿಸಿಕೊಂಡಿರುವ ಪರಶುರಾಮ ಮೂರ್ತಿಯನ್ನು ಮುಂದಿನ ದಿನಗಳಲ್ಲಿ ಬೈಲೂರಿನಲ್ಲಿ ಪ್ರತಿಷ್ಠಾನೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಭರವಸೆ ನೀಡಿದರು.
ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹೊನಲು ಬೆಳಕಿನ ಕ್ರೀಡಾ ಕೂಟಕ್ಕೆ ಸ್ವರಾಜ್ ಮೈದಾನದಲ್ಲಿ ಚಾಲನೆ ನೀಡಿ ಮಾತನಾಡಿದ ಸಚಿವರು, ಪರಶುರಾಮನ ಪುಣ್ಯ ಭೂಮಿ ಕಾರ್ಕಳ, ಇದೀಗ ಆ ಹೆಸರಿಗೆ ಕಪ್ಪು ಚುಕ್ಕೆ ಅಂಟಿದೆ. ಮುಂದಿನ ದಿನಗಳಲ್ಲಿ ಅದೇ ಜಾಗದಲ್ಲಿ ಮೂರ್ತಿಯನ್ನು ಸರ್ಕಾರದ ವತಿಯಿಂದ ನಿರ್ಮಿಸಲಾಗುವುದು ಎಂದರು.
ಕಳೆದ ಚುನಾವಣೆಯಲ್ಲಿ ಸೋತರೂ ಉದಯ್ ಶೆಟ್ಟಿ ಅವರು ಕ್ಷೇತ್ರದ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ನಾನು ಕೂಡ ಎರಡು ಬಾರಿ ಸೋತಿದ್ದೆ. ಆದರೆ, ನಾನು ಜನರ ಸಂಪರ್ಕ ಬಿಡಲಿಲ್ಲ, 2018 ಮತ್ತು 2023ರಲ್ಲಿ ಅತ್ಯಧಿಕ ಮತಗಳಿಂದ ಗೆದ್ದಿರುವೆ ಎಂದರು.

ಉದಯ್ ಶೆಟ್ಟಿ ಅವರು ಸದಾ ಕಾರ್ಕಳ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಾರೆ. ಬೆಂಗಳೂರಿಗೆ ಬಂದಾಗಲೆಲ್ಲಾ ಕ್ಷೇತ್ರದ ಕೆಲಸಗಳ ಬಗ್ಗೆಯೇ ಮಾತನಾಡುತ್ತಾರೆ. ಶಾಸಕರಾಗಲು ಉದಯ್ ಅವರು ಅರ್ಹವಾದ ವ್ಯಕ್ತಿ. ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಮನೆ ಮನೆಗೂ ತಲುಪುವ ಕೆಲಸ ಮಾಡುತ್ತಿದ್ದಾರೆ. ಇದು ನನಗೂ ಪ್ರೇರಣೆಯಾಗಿದ್ದು, ನನ್ನ ಕ್ಷೇತ್ರ ಬೆಳಗಾವಿ ಗ್ರಾಮೀಣದಲ್ಲಿ ಇದೇ ಮಾದರಿಯಲ್ಲಿ ಕಾಂಗ್ರೆಸ್ ಕ್ರೀಡಾಕೂಟ ಆಯೋಜಿಸಲು ಚಿಂತನೆ ನಡೆಸುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಉದಯ್ ಶೆಟ್ಟಿ ಮುನಿಯಾಲು, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್, ಗೋಪಿನಾಥ್ ಭಟ್, ಮಂಜುನಾಥ್ ಪೂಜಾರಿ, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ಸುಧಾಕರ್ ಕೋಟ್ಯಾನ್, ಅಜಿತ್ ಹೆಗ್ಡೆ, ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.



