
ಪ್ರಗತಿವಾಹಿನಿ ಸುದ್ದಿ: ಶಾಲೆಯಲ್ಲಿ ಖನಿಜಾಂಶದ ಮಾತ್ರೆ ಸೇವಿಸಿದ್ದ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಇಂದು ಮಧ್ಯಾಹ್ನ ಶಾಲೆಯಲ್ಲಿ ಖನಿಜಾಂಶದ ಮಾತ್ರೆ ಸೇವಿಸಿದ್ದ 59 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.
ಅನಿಮಿಯಾ ತಡೆಗಟ್ಟಲು ಶಾಲೆಯಲ್ಲಿ ವಾರಕ್ಕೆ ಒಮ್ಮೆ ವಿದ್ಯಾರ್ಥಿಗಳಿಗೆ ಖನಿಜಾಂಶದ ಮಾತ್ರೆ ನೀಡಲಾಗುತ್ತಿತ್ತು. ಅದರಂತೆ ಇಂದು ಕೂಡ ಶಾಲೆಯಲ್ಲಿ ಮಧ್ಯಾಹ್ನ ಊಟದ ಬಳಿಕ ವಿದ್ಯಾರ್ಥಿಗಳಿಗೆ ಮಾತ್ರೆ ಕೊಡಲಾಗಿದೆ. ಮಾತ್ರೆ ಸೇವಿಸ ಕೆಲ ಸಮಯದಲ್ಲೇ ಇಬ್ಬರು ವಿದ್ಯಾರ್ಥಿಗಳು ಹೊಟ್ಟೆ ನೋವು ಎಂದು ಹೇಳಿದ್ದರು.
ಕೆಲ ಸಮಯದ ಬಳಿಕ 59 ವಿದ್ಯಾರ್ಥಿಗಳು ಒಮ್ಮೆಲೆ ಹೊಟ್ಟೆನೋವೆಂದು ಹೇಳಿದ್ದಾರೆ.ಖನಿಜಾಂಶದ ಮಾತ್ರೆ ಸೇವಿಸಿದ ಒಂದು ಗಂಟೆಯಲ್ಲಿ ವಿದ್ಯಾರ್ಥಿಗಳಿಗೆ ರಿಯಾಕ್ಷನ್ ಆಗಿದೆ. ಅಸ್ವಸ್ಥ ವಿದ್ಯಾರ್ಥಿಗಳನ್ನು ತಕ್ಷಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಡಿಹೆಚ್ ಒ ಮಕ್ಕಳ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.




