Belagavi NewsBelgaum NewsKannada NewsKarnataka NewsLatest

*ಭ್ರಷ್ಟಾಚಾರ, ದುರಾಡಳಿತ ಮತ್ತು ನಿರ್ಲಕ್ಷ್ಯದಿಂದ ಬೆಳಗಾವಿ ಪಾಲಿಕೆ ಆಡಳಿತ ಸಂಪೂರ್ಣ ವಿಫಲ: ರಾಜು ಟೋಪಣ್ಣವರ್ ಆರೋಪ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಬೇಜವಾಬ್ದಾರಿ ಹಾಗೂ ವಿಪಕ್ಷ ಕಾಂಗ್ರೆಸ್‌ನ ನಿರ್ಲಕ್ಷ್ಯದಿಂದ ನಗರಾಡಳಿತ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ ಎಂದು ಸಾಮಾಜಿಕ ಹೋರಾಟಗಾರ ರಾಜಕುಮಾರ ಟೋಪಣ್ಣವರ ಗಂಭೀರ ಆರೋಪ ಮಾಡಿದ್ದಾರೆ.

ಪಾಲಿಕೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದಿಂದ ಜನರು ಬಿಜೆಪಿಗೆ ಆಡಳಿತದ ಅಧಿಕಾರ ನೀಡಿದ್ದಾರೆ. ಆದರೆ ಇಂದು ಪಾಲಿಕೆ ಭ್ರಷ್ಟಾಚಾರ, ದುರಾಡಳಿತ ಮತ್ತು ನಿರ್ಲಕ್ಷ್ಯದಿಂದ ಸಂಪೂರ್ಣವಾಗಿ ವೈಫಲ್ಯ ಅನುಭವಿಸುತ್ತಿದೆ ಎಂದು ಹೇಳಿದರು.

ಪಾಲಿಕೆಯ ಆದಾಯ ವೃದ್ಧಿಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ. ಮಾರ್ಚ್ ೨೦೨೨ರಿಂದ ಪಾಲಿಕೆಯ ಆದಾಯದಲ್ಲಿ ನಿರಂತರ ಕುಸಿತವಾಗುತ್ತಿದೆ. ಬೆಳಗಾವಿ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1.58 ಲಕ್ಷ ಆಸ್ತಿಗಳಿದ್ದು, ಕೇವಲ 70% ಜನ ಮಾತ್ರ ತೆರಿಗೆ ಪಾವತಿಸುತ್ತಿದ್ದಾರೆ; ಉಳಿದ 30% ಜನ ತೆರಿಗೆ ತಪ್ಪಿಸುತ್ತಿದ್ದಾರೆ. ಹಿಂದಿನ ಆಡಳಿತದಲ್ಲಿ ತೆರಿಗೆ ವಸೂಲಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬೀದಿಗಿಳಿದು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಬಿಜೆಪಿ ಆಡಳಿತ ಬಂದ ಬಳಿಕ ತೆರಿಗೆ ಸಂಗ್ರಹಕ್ಕೆ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

ನಗರದ ಪಾಲಿಕೆ ವಾಣಿಜ್ಯ ಮಳಿಗೆಗಳ ಲೀಸ್ ಅವಧಿ ಮಾರ್ಚ್ 2022ಕ್ಕೆ ಮುಗಿದಿದ್ದರೂ ಇಂದಿಗೂ ಹೊಸ ಹರಾಜು ಪ್ರಕ್ರಿಯೆ ನಡೆಸಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ಆದಾಯ ನಷ್ಟವಾಗುತ್ತಿದೆ. ಒಂದು ಕಡೆ ಆದಾಯ ಕುಸಿತವಾಗುತ್ತಿದ್ದರೆ, ಮತ್ತೊಂದು ಕಡೆ ಪಾಲಿಕೆ ಸದಸ್ಯರ ಅನಾವಶ್ಯಕ ವೆಚ್ಚಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.

Home add -Advt

ಸಿಐಟಿಐಐಎಸ್ 2.0 ಯೋಜನೆ ಜಾರಿಗೆ ಬಂದರೆ ತ್ಯಾಜ್ಯ ನಿರ್ವಹಣದಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯ. ಕಸದ ವೈಜ್ಞಾನಿಕ ವಿಂಗಡಣೆ, ಮರುಬಳಕೆ, ಕಾಂಪೋಸ್ಟ್ ಉತ್ಪಾದನೆ, ಸ್ವಚ್ಛತೆ ಸುಧಾರಣೆ, ಹಸಿರು ಉದ್ಯೋಗ ಸೃಷ್ಟಿಗೆ ಈ ಯೋಜನೆ ಸಹಕಾರಿಯಾಗಲಿದೆ. ಆದರೆ ಪಾಲಿಕೆ ತನ್ನ ಪಾಲಿನ ಅನುದಾನವನ್ನು ತಕ್ಷಣ ಬಿಡುಗಡೆ ಮಾಡದೇ ಹಾಗೂ ಟೆಂಡರ್ ಪ್ರಕ್ರಿಯೆ ವಿಳಂಬಗೊಳಿಸುತ್ತಿರುವುದರಿಂದ ಯೋಜನೆ ಕೈತಪ್ಪುವ ಅಪಾಯ ಎದುರಾಗಿದೆ.

ಕರ್ನಾಟಕದ ಆರು ಸ್ಮಾರ್ಟ್ ಸಿಟಿಗಳ ಪೈಕಿ ಬೆಳಗಾವಿ ಮಾತ್ರ ಈ ಯೋಜನೆಗೆ ಆಯ್ಕೆಯಾಗಿದೆ ಎಂಬುದು ಹೆಮ್ಮೆಯ ಸಂಗತಿ. ಆದರೆ ಪಾಲಿಕೆ ಕೌನ್ಸಿಲ್‌ನ ದುರಾಡಳಿತದಿಂದ ಈ 138 ಕೋಟಿ ರೂಪಾಯಿ ಮೌಲ್ಯದ ಯೋಜನೆ ಅಪಾಯದಲ್ಲಿದೆ. ಈ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ 40% ಹಾಗೂ ಪಾಲಿಕೆ 20% ಹಣ ನೀಡಬೇಕು. ರಾಜ್ಯ ಸರ್ಕಾರ ಈಗಾಗಲೇ ತಾನು ನೀಡಿರುವ ಅನುದಾನಲ್ಲೇ ಬಳಸಿಕೊಳ್ಳುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ತನ್ನ ಪಾಲಿನ ಅನುದಾನ ಸೇರಿ, ಸುಮಾರು 81 ಕೋಟಿ ರೂ. ಹಣವನ್ನು ಹೊಂದಾಣಿಕೆ ಮಾಡದಿದ್ದರೆ ಯೋಜನೆ ವಾಪಸ್ಸಾಗುವ ಸಾಧ್ಯತೆ ಇದೆ.

ಈಗಾಗಲೇ ಪಾಲಿಕೆ 65 ಕೋಟಿ ರೂ. ತೆರಿಗೆ ಸಂಗ್ರಹಿಸಿ, ಸುಮಾರು 60 ಕೋಟಿ ರೂ. ಖರ್ಚು ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಉಳಿದ ಹಣವನ್ನು ಹೇಗೆ ಹೊಂದಾಣಿಕೆ ಮಾಡಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಯೋಜನೆ ಅನುಷ್ಠಾನವಾಗುತ್ತದೆಯೇ ಅಥವಾ ಕೈತಪ್ಪುತ್ತದೆಯೇ ಎಂಬುದಕ್ಕೆ ಪಾಲಿಕೆ ಕೌನ್ಸಿಲ್ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಇಷ್ಟೊಂದು ಮಹತ್ವದ ಯೋಜನೆ ಕೈತಪ್ಪುವ ಸ್ಥಿತಿ ನಿರ್ಮಾಣವಾಗಿದ್ದರೂ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹಾಗೂ ಸ್ಥಳೀಯ ಶಾಸಕ ಅಭಯ ಪಾಟೀಲ್ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಜನತೆಗೆ ಸ್ಪಷ್ಟಪಡಿಸಬೇಕು ಎಂದು ಹೇಳಿದರು.

ವಿಪಕ್ಷ ಕಾಂಗ್ರೆಸ್ ಸದಸ್ಯರು ಪಾಲಿಕೆ ಸಭೆಗಳಲ್ಲಿ ಕಟ್ಟುನಿಟ್ಟಿನ ಹೋರಾಟ ನಡೆಸುತ್ತಿಲ್ಲ. ಇ-ಆಸ್ತಿ ಸೇರಿದಂತೆ ಹಲವು ವಿಷಯಗಳಲ್ಲಿ ಆಡಳಿತ ಹಾಗೂ ವಿಪಕ್ಷ ಸೇರಿಕೊಂಡು ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಅವರು ಪ್ರಕಟಣೆಯಲ್ಲಿ ಮಾಡಿದ್ದಾರೆ.

Related Articles

Back to top button