*ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿಯಾಗಿಸಿದ ಪರಾಧಿಗೆ 30 ವರ್ಷ ಜೈಲು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅತ್ಯಾಚಾರಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ಪೊಕ್ಸೋ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ಜೂನ್ 2020ರಲ್ಲಿ ಎಪಿಎಂಸಿ ಠಾಣೆಯಲ್ಲಿ ಸಂತ್ರಸ್ತ ಬಾಲಕಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿತ್ತು. ಆರೋಪಿ ಕಂಗ್ರಾಳಿ ಕೆಎಚ್‌ನ ನಾಗೇಶ ಕರೆಪ್ಪಾ ಲಮಾಣಿ(20) ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಕೆಯ ಮನೆಗೆ ನುಗ್ಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಈ ಬಗ್ಗೆ ಬಾಯ್ಬಿಟ್ಟರೆ ಮನೆಯವರನ್ನು ಕೊಲ್ಲುವ ಬೆದರಿಕೆ ಹಾಕಿದ್ದ. ನಂತರ ಬಾಲಕಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು. ತನಗಾದ ಅನ್ಯಾಯದ ಬಗ್ಗೆ ಎಪಿಎಂಸಿ ಠಾಣೆಗೆ ದೂರು ನೀಡಿದ್ದಳು.
ಅಂದಿನ ಪಿಎಸ್‌ಐ ಮಂಜುನಾಥ ಭಜಂತ್ರಿ ಅವರು ದೂರು ದಾಖಲಿಸಿದ್ದರು. ಮುಂದಿನ ಕ್ರಮಕ್ಕಾಗಿ ತನಿಖಾಧಕಾರಿ ದಿಲೀಪಕುಮಾರ ಕೆ ಎಚ್ಪಿ ಅವರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ-೦1 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಒಟ್ಟು 7 ಸಾಕ್ಷಿಗಳ ವಿಚಾರಣೆ ಹಾಗೂ ೩೭ ದಾಖಲೆಗಳ ಆಧಾರದ ಮೇಲಿಂದ ಆರೋಪಿ ನಾಗೇಶ ಕರೆಪ್ಪಾ ಲಮಾಣಿ ಮೇಲಿನ ಆರೋಪ ಸಾಬೀತಾಗಿವೆ ಎಂದು ನ್ಯಾಯಾಧೀಶರಾದ ಶ್ರೀಮತಿ ಸಿ, ಎಮ, ಪುಷ್ಪಲತಾ ಇವರು ಗುರುವಾರ ತೀರ್ಪು ನೀಡಿದ್ದಾರೆ.
ಅಪರಾಧಿಗೆ 30 ವರ್ಷಗಳ ಕಠಿಣ ಕಾರಾಗ್ರಹ ಶಿಕ್ಷೆ, 2 ಲಕ್ಷರೂ ದಂಡ ತಪ್ಪಿದ್ದರೆ ಮತ್ತೆ 1 ವರ್ಷ ಜೈಲು ಶಿಕ್ಷೆಗೆ ಆದೇಶಿಸಲಾಗಿದೆ. ಇನ್ನು ಸಂತ್ರಸ್ತ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂಪಾಯಿ ೭ ಲಕ್ಷಗಳನ್ನು ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿದ್ದು, ಈ ಪರಿಹಾರ ಹಣವನ್ನು 5 ವರ್ಷಗಳವರೆಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿಯಾಗಿ ಇಡಲು ಸೂಚಿಸಿದೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಎಲ್. ವಿ ಪಾಟೀಲ, ವಿಶೇಷ ಸರ್ಕಾರಿ ಅಭಿಯೋಜಕರು, ಬೆಳಗಾವಿ ಇವರು ಹಾಜರಾಗಿ ವಾದ ಮಂಡಿಸಿದರು.




