ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಸ್ಮಾರ್ಟ್ ಸಿಟಿ ಯೋಜನೆಯನ್ನು ಬೆಳಗಾವಿಯಲ್ಲಿ ಅತ್ಯುತ್ತಮವಾಗಿ ನಡೆಸುತ್ತಿದ್ದೀರಿ. ಸಧ್ಯಕ್ಕೆ 4ನೇ ಸ್ಥಾನದಲ್ಲಿದೆ. ಇನ್ನಷ್ಟು ವೇಗ ಹೆಚ್ಚಿಸಿ 1ನೇ ಸ್ಥಾನಕ್ಕೆ ತನ್ನಿ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭಾನುವಾರ ಸ್ಮಾರ್ಟ್ ಸಿಟಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಕೆಲಸವನ್ನು ಬಹಳ ಚೆನ್ನಾಗಿ ಮಾಡುತ್ತಿದ್ದೀರಿ. ಸಧ್ಯಕ್ಕೆ ಬೆಳಗಾವಿ ಸ್ಮಾರ್ಟ್ ಸಿಟಿ ಕೆಲಸಗಳು 4ನೇ ಸ್ಥಾನದಲ್ಲಿದೆ. ಉತ್ತಮವಾಗಿ ಕೆಲಸ ನಡೆಯುತ್ತಿದೆ. ಇದನ್ನು ಇನ್ನಷ್ಟು ವೇಗವಾಗಿ ಮಾಡುವ ಮೂಲಕ ನಂಬರ್ 1ಕ್ಕೆ ತಂದು ನಿಲ್ಲಿಸಿ ಎಂದು ಹೇಳಿದರು.
ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ನಲ್ಲಿ ತಜ್ಞ ಮತ್ತು ಪ್ರಾಮಾಣಿಕ ಕೆಲಸಗಾರರನ್ನು ನೇಮಿಸಿ. ಇಲ್ಲವಾದಲ್ಲಿ ಇಷ್ಟೊಂದು ಹಣ ಖರ್ಚಿ ಮಾಡಿದ್ದು ವ್ಯರ್ಥವಾಗುತ್ತದೆ. ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಹೇಳಿದಂತೆ ನಗರದ ವ್ಯವಸ್ಥೆಯನ್ನು ಸರಿಯಾಗಿ ನಯಂತ್ರಿಸುವ ಕೆಲಸವಾಗಬೇಕು. ಶಾಸಕರು, ಗಣ್ಯರು ನೀಡಿರುವ ಸಲಹೆಗಳನ್ನು ಸೂಕ್ತವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಿ ಎಂದು ಅಂಗಡಿ ಸೂಚಿಸಿದರು.
ಗ್ರಾಮೀಣ ಕ್ಷೇತ್ರಕ್ಕೆ ಯೋಜನೆ ಕೊಡಿ
ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹಲವಾರು ಯೋಜನೆಗಳನ್ನು ನಡೆಸಲಾಗುತ್ತಿದೆ. ಅದರಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೂ ಹೆಚ್ಚಿನ ಹಣ ಕೊಡಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿನಂತಿಸಿದರು.
ಸ್ಮಾರ್ಟ್ ಅಂಗನವಾಡಿಗಳನ್ನು ನಿರ್ಮಾಣ ಮಾಡಬೇಕು. ಸ್ಮಾರ್ಟ ಬಸ್ ಶೆಲ್ಟರ್, ಸ್ಮಾರ್ಟ ಹಳ್ಳಿಗಳನ್ನು ನಿರ್ಮಾಣ ಮಾಡಬೇಕು. ಗ್ರಾಮೀಣ ಕ್ಷೇತ್ರದ ಕಂಗರಾಳಿ ಕೆಎಚ್ ಕೆರೆಯನ್ನು ಸೌಂದರ್ಯೀಕರಣಗೊಳಿಸಬೇಕು ಎಂದು ಅವರು ವಿನಂತಿಸಿದರು. ಗ್ರಾಮೀಣ ಕ್ಷೇತ್ರದ ಗಾರ್ಡನ್ ಗಳನ್ನು ಅಭಿವೃದ್ಧಿಪಡಿಸಬೇಕು. ಲೈಟಿಂಗ್ ಮಾಡಬೇಕು. ನಗ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಕ್ಷೇತ್ರದಲ್ಲಿ ಯಾವ್ಯಾವ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವೋ ಮಾಡಿ ಎಂದು ಕೋರಿದರು.
ಪ್ರಭಾಕರ ಕೋರೆ ಹಲವು ಸಲಹೆ
ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹಲವು ಸಲಹೆಗಳನ್ನು ನೀಡಿದರು. ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆದ್ಯತೆ ನೀಡಬೇಕು. ಇದರಿಂದ ಪ್ರವಾಸೋದ್ಯಮ ಬೆಳೆಯುತ್ತದೆ. ಕಾಂಗ್ರೆಸ್ ರಸ್ತೆಯ ಕಾಮಗಾರಿ ಅತ್ಯಂತ ಕಳಪೆಯಾಗಿದೆ. ಗುಣಮಟ್ಟ ನಿಯಂತ್ರಣ ವ್ಯವಸ್ಥೆಯಾಗಬೇಕು. ಫಿಶ್ ಮಾರ್ಕೆಟ್ ಅಭಿವೃದ್ಧಿಪಡಿಸಬೇಕು ಎಂದು ಅವರು ಸೂಚಿಸಿದರು.
ನಗರದಲ್ಲಿ ಅಳವಡಿಸಿರುವ ಬೀದಿ ದೀಪಗಳ ಕಂಬಗಳೇ ದೊಡ್ಡದಿದ್ದು ಬಲ್ಬ್ ಗಳು ಚಿಕ್ಕದಿವೆ. ಬೆಳಕು ಕಾಣುವ ಬದಲು ಕಂಬಗಳೇ ಕಾಣುತ್ತಿವೆ. ಡಿಸೈನ್ ಬದಲಿಸಬೇಕು. ಕೆಲವೆಡೆ ಸಾರ್ವಜನಿಕ ಹಿತದೃಷ್ಟಿಯಿಂದ ಅನಿವಾರ್ಯವಿರುವ ಕಡೆ ಕ್ಯಾಂಟೋನ್ಮೆಂಟ್ ನವರು ಅಡ್ಡಿಪಡಿಸಿದರೂ ಕೆಲಸ ಮಾಡಿ. ಜೈಲಿಗೆ ಹಾಕಿದರೆ ನೋಡೋಣ ಎಂದು ಪ್ರಭಾಕರ ಕೋರೆ ಸೂಚಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕ್ರೀಡೆಗೆ ಆದ್ಯತೆ ನೀಡಲಾಗಿಲ್ಲ. ಸ್ವಿಮ್ಮಿಂಗ್ ಫೂಲ್ ಗಳನ್ನು ನಿರ್ಮಿಸಬೇಕು ಎಂದೂ ಅವರು ಹೇಳಿದರು.
ಹುಬ್ಬಳ್ಳಿ -ಧಾರವಾಡ ಸೇರಿಸಿ
ನಗರದಲ್ಲಿ ತ್ಯಾಜ್ಯ ನಿರ್ವಹಣೆಗೆ ಸರಿಯಾದ ಯೋಜನೆ ರೂಪಿಸಬೇಕು. ಇದಕ್ಕೆ ಹುಬ್ಬಳ್ಳಿ -ಧಾರವಾಡವನ್ನೂ ಸೇರಿಸಿ ಎರಡೂ ನಗರಗಳು ಸೇರಿದರೆ ಕಡಿಮೆ ಖರ್ಚಿನಲ್ಲಿ ಉತ್ತಮ ವ್ಯವಸ್ಥೆ ಮಾಡಲು ಸಾಧ್ಯವಿದೆ ಎಂದು ಮುಖ್ಯಮತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಸಲಹೆ ನೀಡಿದರು.
ಸಿಮೆಂಟ್ ರಸ್ತೆಗಳನ್ನು ಸರಿಯಾದ ಗುಣಮಟ್ಟದಿಂದ ಮಾಡಬೇಕು. ಇಲ್ಲವಾದಲ್ಲಿ ಮುಂದೆ ದೊಡ್ಡ ಸಮಸ್ಯೆಯಾಗುತ್ತದೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಡಿಸ್ಪ್ಲೆ ಬೋರ್ಡ್ ಗಳನ್ನು ಅಳವಡಿಸಬೇಕು ಎಂದು ಅವರು ಸಲಹೆ ನೀಡಿದರು.
ನಮ್ಮ ಮೇಲೆ ಅಪವಾದ ಬರುತ್ತದೆ
ರಸ್ತೆಗಳು ನಿರ್ಮಾಣವಾದ ನಂತರ 28 ದಿನ ಕ್ಯೂರಿಂಗ್ ಮಾಡುವವರೆಗೆ ಸಂಚಾರವನ್ನು ಪ್ರತಿಬಂಧಿಸಿ. ಇಲ್ಲವಾದಲ್ಲೆ ನಂತರ ಬಿರುಕು ಬಿಡುತ್ತದೆ. ಆಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರು, ಸಂಸದರು ಹಣ ಹೊಡೆದಿದ್ದಾರೆ ಎನ್ನುವ ಆರೋಪ ಬರುತ್ತದೆ. ಯಾರೂ ದುಡ್ಡು ಹೊಡೆಯಲು ಸಾಧ್ಯವಾಗದಂತೆ ಗುತ್ತಿಗೆದಾರರಿಗೆ ಅನುಕೂಲವಾಗಿವಂತಿದೆ ಸ್ಮಾರ್ಟ್ ಸಿಟಿ ಯೋಜನೆ ಎಂದು ಶಾಸಕ ಅಭಯ ಪಾಟೀಲ ಮಾರ್ಮಿಕವಾಗಿ ನುಡಿದರು.
ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆಯಾಗಬೇಕು.ರಸ್ತೆಗಳು ಬೀದಿ ವ್ಯಾಪಾರಿಗಳಿಂದ ಮುಕ್ತವಾಗಬೇಕು. ಇಲ್ಲವಾದಲ್ಲಿ ಸ್ಮಾರ್ಟ್ ಸಿಟಿ ಮಾಡಿಯೂ ಪ್ರಯೋಜನವಿಲ್ಲ. ಸ್ಮಾರ್ಟ್ ಸಿಟಿ ಯೋಜನೆ ಸಮರ್ಪಕವಾಗಿ ಆದರೆ ನಗರದಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಸಂಚಾರ ವ್ಯವಸ್ಥೆ ಸುಗಮವಾಗಲಿದೆ. ಯೋಜನೆಯ ಕಾಮಗಾರಿ ಅತ್ಯಂತ ವೇಗವಾಗಿ ಮತ್ತು ಸರಾಯದ ರೀತಿಯಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದರು.
ಬೀದಿ ನಾಯಿ ನಿಯಂತ್ರಿಸಿ
ಶಾಸಕ ಅನಿಲ ಬೆನಕೆ ಮಾತನಾಡಿ, ಬಿಡಾಡಿ ದನಗಳಿಗೆ ಶೆಲ್ಟರ್ ಮಾಡಿದಂತೆ ಬೀದಿ ನಾಯಿಗಳ ನಿಯಂತ್ರಣಕ್ಕೂ ವ್ಯವಸ್ಥೆಯಾಗಬೇಕು. ನಾಯಿಗಳು ಬಸ್ ಶೆಲ್ಟರ್ ಗಳಲ್ಲಿ ಮಲಗುತ್ತಿವೆ. ಬಸ್ ಗಳು ಬಸ್ ನಿಲ್ದಾಣದಲ್ಲಿ ನಿಲ್ಲುವ ಬದಲು ದೂರ ಹೋಗಿ ನಿಲ್ಲುತ್ತವೆ. ಬಸ್ ನಿಲ್ದಾಣಗಳಲ್ಲಿ ಆಟೋಗಳು ನಿಲ್ಲುತ್ತಿವೆ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸಮಗ್ರ ಮಾಹಿತಿ ನೀಡಿದರು. ಎದುರಾಗುತ್ತಿರುವ ಸಮಸ್ಯೆಗಳನ್ನೂ ಸಚಿವರು, ಶಾಸಕರ ಮುಂದಿಟ್ಟು ಪರಿಹಾರ ಒದಗಿಸಲು ಸಹಕಾರ ನೀಡುವಂತೆ ವಿನಂತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ