Belagavi NewsBelgaum NewsKannada NewsKarnataka NewsNationalPolitics

*ಕ್ಷೇತ್ರದಲ್ಲಿ ಎಲ್ಲಾ ಸಮುದಾಯದವರು ಒಂದೇ ಎಂಬ ಭಾವನೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌*  

ಸಂತ ಸೇವಾಲಾಲ ಜಯಂತಿ ಸಮಾರಂಭದಲ್ಲಿ ಸಚಿವರ ಹೇಳಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮನೆ ಮಗಳಾಗಿ ಎಲ್ಲಾ ಸಮುದಾಯ, ಎಲ್ಲಾ ಜಾತಿಯವರ ಸೇವೆ ಮಾಡುತ್ತಿರುವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಶಾಹು ನಗರದ ಸಾಯಿ ತಾಂಡಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಂಜಾರ ಸಮುದಾಯದ ಆರಾಧ್ಯ ದೈವ, ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ ಉತ್ಸವದಲ್ಲಿ ಮಾತನಾಡಿದ ಸಚಿವರು, ಎಲ್ಲಾ ಜಾತಿ, ಧರ್ಮದವರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಿರುವೆ, ಎಲ್ಲರನ್ನು ಮನೆಯವರಂತೆ ಕಾಣುತ್ತಿರುವೆ ಎಂದರು. 

Home add -Advt

1700ರಲ್ಲಿ ಸಂತ ಸೇವಾಲಾಲ್‌ ಅವರು ಬಂಜಾರ ಸಮಾಜವನ್ನು ಸುಧಾರಿಸಲು ಪಣತೊಟ್ಟಿದ್ದರು. ಅವರು ಹುಟ್ಟಿನಿಂದಲೇ ಪವಾಡ ಪುರುಷರಾಗಿದ್ದರು. ಅವರೊಬ್ಬ ದೈವತ್ವ, ದೇವರ ಅಂಶವನ್ನು ಉಳ್ಳ ವ್ಯಕ್ತಿಯಾಗಿದ್ದರು ಎಂದು ಸಚಿವರು ಹೇಳಿದರು. 

ನಮ್ಮ ಸಂಸ್ಕೃತಿಯ ಉಳಿವಿಗಾಗಿ ಸಂತ ಸೇವಾಲಾಲ್‌ ಅವರು ಆಧ್ಯಾತ್ಮಿಕ ಚಿಂತನೆಗಳನ್ನು ಹೊಂದಿದ್ದರು. ಗುಡ್ಡಗಾಡು ಪ್ರದೇಶದಲ್ಲಿದ್ದ ಸಮುದಾಯದ ಜನರನ್ನು ಒಗ್ಗೂಡಿಸಿದ್ದರು. ಇಂತ ಮಾನವತಾವಾದಿ, ಯುಗ ಪುರುಷನ ಜಯಂತಿಯನ್ನು ಸರ್ಕಾರ ಮಾಡಿಕೊಂಡು ಬರುತ್ತಿದೆ ಎಂದರು. 

ಸಂತ ಸೇವಾಲಾಲ್‌ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕಾದದ್ದು ನಮ್ಮೆಲ್ಲರ ಕರ್ತವ್ಯ, ನಮ್ಮ ಮಕ್ಕಳಿಗೂ ಸಂತ ಸೇವಾಲಾಲ್‌ ಅವರ ಇತಿಹಾಸವನ್ನು, ಮಾರ್ಗದರ್ಶನವನ್ನು ತಿಳಿಸಿಕೊಡಬೇಕು ಎಂದು ಸಚಿವರು ಹೇಳಿದರು. 

ಸಮಾಜದ ದೇವಸ್ಥಾನಕ್ಕೆ 25 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿರುವೆ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಎಲ್ಲ ಸಮುದಾಯದವರನ್ನು ಒಂದೇ ಎಂಬ ಭಾವನೆಯಲ್ಲಿ ನೋಡುತ್ತಿರುವೆ. ಸಮಾಜದ ಮುಖಂಡರ ಕೋರಿಕೆಯಂತೆ ದೇವಸ್ಥಾನಕ್ಕೆ ಮತ್ತೆ 15 ಲಕ್ಷ ರೂಪಾಯಿಗಳನ್ನು ನೀಡಿರುವೆ. ನನ್ನ ಪಾಲಿಗೆ ದೇವಸ್ಥಾನಗಳು ನಮ್ಮ ಶ್ರದ್ದಾ ಸ್ಥಳಗಳು ಎಂದು ಭಾವಿಸಿರುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ತಿಳಿಸಿದರು. 

ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ,‌ ಸಮಾಜದ ಮುಖಂಡರಾದ ವಸಂತ ರಾಠೋಡ್, ಶ್ರೀಕಾಂತ ಲಂಬಾಣಿ, ಜೈರಾಮ ಪಾಟೀಲ, ಅನಿಲ್ ಪಾವಸೆ, ಉಮೇಶ ಪಾಟೀಲ, ತಾನಾಜಿ ಪಾಟೀಲ, ವಿನೋದ್ ಪಾಟೀಲ, ಪರಶುರಾಮ ರಾಠೋಡ್, ಮಾದೇವ್ ಪಮ್ಮಾರ್, ರುದ್ರಪ್ಪ ಗೌಡರ, ರಾಮಚಂದ್ರ ರಾಠೋಡ್, ಚನ್ನಪ್ಪ ಪೂಜಾರಿ, ಶಂಕರ ಪಮ್ಮಾರ, ಅಶೋಕ ಚೌವಾಣ, ಮೋತಿಲಾಲ್ ರಾಠೋಡ್, ಪುಂಡಲೀಕ್ ಪಮ್ಮಾರ್, ನಿಂಗಪ್ಪ ವಕೀಲರು ಉಪಸ್ಥಿತರಿದ್ದರು.

Related Articles

Back to top button