*ಕೊಂಡಸಕೊಪ್ಪದಲ್ಲಿ ಸಂಭ್ರಮವೋ ಸಂಭ್ರಮ: ಲಕ್ಷ್ಮೀ ಹೆಬ್ಬಾಳಕರ್ ಗೆ ಅದ್ಧೂರಿ ಸ್ವಾಗತದ ನಡುವೆ ಶಿವಾಜಿ ಮಹಾರಾಜರ ಮೂರ್ತಿ ಲೋಕಾರ್ಪಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೊಂಡಸಕೊಪ್ಪ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಅವರ ಭವ್ಯ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮವು ಅಪಾರ ಸಂಭ್ರಮ, ಭಕ್ತಿ ಹಾಗೂ ಅದ್ಧೂರಿತನದ ನಡುವೆ ಜರುಗಿತು. ಇಡೀ ಗ್ರಾಮ ಹಬ್ಬದ ವಾತಾವರಣದಲ್ಲಿ ತೇಲಿದರೆ, ರಸ್ತೆಗಳನ್ನು ಅಲಂಕರಿಸಿದ ಧ್ವಜ-ಫ್ಲೆಕ್ಸ್‌ಗಳು ಹಾಗೂ ಜನರ ಹರ್ಷೋದ್ಘಾರ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದವು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸ್ವಂತ ಖರ್ಚಿನಲ್ಲಿ ಮೂರ್ತಿಯನ್ನು ನಿರ್ಮಾಣ ಮಾಡಿಸಿರುವುದು ಗ್ರಾಮಸ್ಥರಲ್ಲಿ ಇನ್ನಷ್ಟು ಗೌರವಭಾವ ಮೂಡಿಸಿತು. ಸಂಜೆ ಗ್ರಾಮಕ್ಕೆ ಆಗಮಿಸಿದ ಸಚಿವರನ್ನು ಊರಿನ ಪ್ರವೇಶದಿಂದಲೇ ಮೆರವಣಿಗೆ ಮೂಲಕ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಡೊಳ್ಳು-ತಾಶೆಗಳ ಘೋಷ, ಹೂವಿನ ಮಳೆಯ ಸ್ವಾಗತ ಮತ್ತು ಘೋಷಣೆಗಳ ನಡುವೆ ನಡೆದ ಮೆರವಣಿಗೆ ಸಂಭ್ರಮದ ಶಿಖರ ತಲುಪಿತು.
ಸಂಭ್ರಮವನ್ನು ಕಂಡು ಮಾತನಾಡಿದ ಸಚಿವೆ, “ಬಾರಾಮತಿಯಂತೆ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನನ್ನ ಕನಸು ಈಗ ಸಾಕಾರವಾಗುತ್ತಿದೆ. ಇನ್ನಷ್ಟು ಅಭಿವೃದ್ಧಿಗೆ ನಿಮ್ಮೆಲ್ಲರ ಮಾರ್ಗದರ್ಶನ ಅಗತ್ಯ,” ಎಂದರು.
ಸುವರ್ಣ ವಿಧಾನಸೌಧ ಇದ್ದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೆಸರು ಅಷ್ಟಾಗಿ ಪರಿಚಿತವಾಗಿರಲಿಲ್ಲ; ಆದರೆ ಈಗ ರಾಜ್ಯದ ಎಲ್ಲೆಡೆ ಕ್ಷೇತ್ರ ಚಿರಪರಿಚಿತವಾಗಿದೆ ಎಂದು ಅವರು ಹೇಳಿದರು.ಕಳೆದ ವರ್ಷಗಳಲ್ಲಿ ಕ್ಷೇತ್ರದ 154 ಮಂದಿರಗಳ ಜೀರ್ಣೋದ್ಧಾರ ಹಾಗೂ ಎಲ್ಲ ಗ್ರಾಮಗಳಲ್ಲಿ ಮಹಾತ್ಮರ ಪುತ್ಥಳಿ ಸ್ಥಾಪನೆ ಮಾಡಿರುವುದನ್ನೂ ಅವರು ಉಲ್ಲೇಖಿಸಿದರು.
“ಚುನಾವಣೆ ಸಮಯದಲ್ಲಿ ಮಾತ್ರ ಬರುವವರಂತೆ ಅಲ್ಲ; ನಾನು ವರ್ಷಪೂರ್ತಿ ನಿಮ್ಮ ಜೊತೆಯಲ್ಲೇ ಕೆಲಸ ಮಾಡುತ್ತೇನೆ. ಕಳೆದ 15 ವರ್ಷಗಳಿಂದ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಕ್ಷೇತ್ರದ ಸೇವೆಯಲ್ಲಿದ್ದೇನೆ. ನನ್ನ ಶರೀರ ಗಟ್ಟಿ ಇರುವವರೆಗೆ ನಿಮ್ಮ ಸೇವೆಯೇ ನನ್ನ ಧ್ಯೇಯ,” ಎಂದು ಅವರು ಭಾವುಕರಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, “ಧರ್ಮ ಮತ್ತು ಸಂಸ್ಕೃತಿ ಉಳಿಯಲು ಇಂತಹ ಮಹತ್ವದ ಕಾರ್ಯಗಳು ಅಗತ್ಯ. ಯುವಕರಲ್ಲಿ ದ್ವೇಷವಲ್ಲ, ಸಂಸ್ಕೃತಿ ಬಗ್ಗೆ ಗೌರವ ಬೆಳೆಸಬೇಕು. ಲಕ್ಷ್ಮೀ ಹೆಬ್ಬಾಳಕರ್ ಅವರ ಸೇವಾ ಕಾರ್ಯಗಳಿಂದ ಸಮಾಜದಲ್ಲಿ ಧರ್ಮ-ಸಂಸ್ಕೃತಿ ಬಲವಾಗುತ್ತಿದೆ,” ಎಂದರು. ಕಳೆದ ಎರಡುವರೆ ವರ್ಷಗಳಲ್ಲಿ ಕ್ಷೇತ್ರದಲ್ಲಿ ಸುಮಾರು 1500 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳು ನಡೆದಿರುವುದನ್ನೂ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರ್ಜುನಗೌಡ ಪಾಟೀಲ, ಮಡಿವಾಲ ಪಾಟೀಲ, ದೇವೇಂದ್ರ ದೇವತಕಟ್ಟಿ, ಜ್ಯೋತಿಬಾ ಕುದರೆಮನಿ, ಶಿವಾಜಿ ವಾಳಕಿ, ಲಕ್ಷ್ಮಣ ಪಾಟೀಲ, ಕೇಶವ ಚೌಗುಲೆ, ಜಯವಂತ ಪಾಟೀಲ, ಗಂಗಾರಾಮ ಪಾಟೀಲ, ಸುರೇಶ ಕರಗುಪ್ಪಿಕರ, ಬಾಳಕೃಷ್ಣ ಪಾಟೀಲ, ಗಂಗಾರಾಮ ಹುದಲಿ, ಕೃಷ್ಣಾ ಸನದಿ, ಕಲ್ಲಪ್ಪ ದೇಸಾಯಿ, ವಿಠ್ಠಲ ಸಾಂಬ್ರೆಕರ, ದುರ್ಗಾ ತಿಪ್ಪವಗೋಳ, ಕಲ್ಲಪ್ಪ ಕುದರಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಒಟ್ಟಾರೆ, ಗ್ರಾಮಸ್ಥರ ಉತ್ಸಾಹ, ಅದ್ಧೂರಿ ಸ್ವಾಗತ ಮತ್ತು ಜನರ ಅಭಿಮಾನವು ಈ ಲೋಕಾರ್ಪಣೆ ಕಾರ್ಯಕ್ರಮವನ್ನು ಸ್ಮರಣೀಯ ಉತ್ಸವವಾಗಿ ರೂಪಿಸಿತು.




