ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ
ಪ್ರಸಿದ್ಧ ಧಾರ್ಮಿಕ ಹಾಗೂ ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲದ ಮಲ್ಲಿಕಾರ್ಜುನ ಕ್ಷೇತ್ರಕ್ಕೆ ಬರಲು ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆ ಮಾರ್ಗದ ಕೊಡುಗೆ ನೀಡಿರುವುದು ಸ್ತುತ್ಯರ್ಹ ಕೆಲಸವಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಅವರು ಸ್ಥಳೀಯ ಹಿರೇಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಇತ್ತೀಚೆಗೆ ಶ್ರೀಶೈಲ ಕ್ಷೇತ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಜನಜಾಗೃತಿ ಮತ್ತು ಧರ್ಮ ಸಮ್ಮೇಳನ ಸಮಾರಂಭದಲ್ಲಿ ವಿಡಿಯೋ ಕಾನ್ಫಿರೆನ್ಸ್ ಮೂಲಕ ಮಾತನಾಡಿದ್ದ ಪ್ರಧಾನಿ ಅವರಿಗೆ ನದಿ ಜೋಡಣೆ, ದೇಶದ ರಸ್ತೆಗಳ ಸಂಪರ್ಕ ಜಾಲ ಕೈಕೊಳ್ಳುತ್ತಿರುವಂತೆ 12 ಜ್ಯೋರ್ತಿಲಿಂಗಗಳ ದರ್ಶನಕ್ಕೆ ಸಂಪರ್ಕ ಕಲ್ಪಿಸುವ ಚಿಂತನೆ ವ್ಯಕ್ತಪಡಿಸಿದ್ದೇವು. ಪ್ರಧಾನಿಗಳು ತಕ್ಷಣ ನಮ್ಮ ಕೋರಿಕೆಗೆ ಸ್ಪಂದಿಸಿ ದಕ್ಷಿಣ ಮಧ್ಯ ರೈಲ್ವೆ ವಿಭಾಗಕ್ಕೆ ಶ್ರೀಕ್ಷೇತ್ರ ಸಂಪರ್ಕದ ಸಮೀಕ್ಷೆಗೆ ನಿರ್ದೇಶಿಸಿದರು.
ದಕ್ಷಿಣ ಮಧ್ಯ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ ವಿನೋದಕುಮಾರ ಯಾದವ ಅವರು ಸಮೀಕ್ಷೆ ನಡೆಸಿ 171 ಕಿ.ಮೀ ಅಂತರದ ಹೈದರಾಬಾದ್ದಿಂದ ಜಡ್ಚರ್ಲಾ, ಅಚ್ಚಂಪೇಠ ಮಾರ್ಗವಾಗಿ ಶ್ರೀಶೈಲಂ ತಲುಪುವ 1307 ಕೋಟಿ ರೂ ವೆಚ್ಚದ ರೈಲ್ವೆ ಮಾರ್ಗ ನೀಲನಕ್ಷೆಯನ್ನು ಕೇಂದ್ರ ಸರಕಾರಕ್ಕೆ ಪ್ರಸ್ಥಾವನೆ ಸಲ್ಲಿಸಿದರು. ಆ ಅನುಮೋದಿತ ರೈಲ್ವೆ ಮಾರ್ಗಕ್ಕೆ ಹಸಿರು ನಿಶಾನೆ ತೋರಿ ಮಂಜೂರಾತಿ ಮಾಡಿ ಇತ್ತೀಚೆಗೆ ಶಂಕುಸ್ಥಾಪನೆ ಸಹ ನೆರವೇರಿಸಿದ್ದಾರೆ. ಈ ಯೋಜನೆ ಮೂಲಕ ಕರ್ನಾಟಕ, ಆಂದ್ರ,ತೆಲಂಗಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ನಾಡಿನ ವಿವಿಧೆಡೆಯಿಂದ ಬರುವ ಲಕ್ಷಾಂತರ ಭಕ್ತಾಧಿಗಳಿಗೆ ಸುಗಮ ಸಂಚಾರ ವ್ಯವಸ್ಥೆ ದೊರಕುತ್ತದೆ. ಅದಕ್ಕಾಗಿ ಶ್ರೀಕ್ಷೇತ್ರ ಮತ್ತು ಭಕ್ತಾಧಿಗಳ ಪರವಾಗಿ ಪ್ರಧಾನಿಯವರಿಗೆ ಧನ್ಯವಾದ ಸಲ್ಲಿಸುವುದರ ಜತೆಗೆ ಆದಷ್ಟು ಬೇಗ ಕಾರ್ಯ ನೆರವೇರಿಸಲು ಆಗ್ರಹಿಸುತ್ತೇವೆ ಎಂದು ಅವರು ಹೇಳಿದರು. ಆಧ್ಯಾತ್ಮಿಕ ತವರಾಗಿರುವ ನಮ್ಮ ದೇಶದಲ್ಲಿ ಪಂಚಪೀಠಗಳು ಹಾಗೂ 12 ಜ್ಯೋರ್ತಿಲಿಂಗಗಳು ಸೇರಿದಂತೆ ಅನೇಕ ಧಾರ್ಮಿಕ ಕ್ಷೇತ್ರಗಳು ಪುರಾತನ ಕಾಲದಿಂದ ಇವೆ. ಅವುಗಳಲ್ಲಿ ಕೆಲವೊಂದು ಕ್ಷೇತ್ರಗಳನ್ನು ಸಂದರ್ಶಿಸಲು ಇಂದಿಗೂ ಯಾವುದೇ ಸೂಕ್ತ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲ. ಅಂತಹ ಕ್ಷೇತ್ರಗಳಲ್ಲಿ ಒಂದಾಗಿರುವ ಆಂಧ್ರ್ರಪ್ರದೇಶದ ಶ್ರೀಶೈಲ ಪೀಠಕ್ಕೆ ಲಕ್ಷಾಂತರ ಭಕ್ತಾಧಿಗಳು ಯುಗಾದಿ ಸಂದರ್ಭದಲ್ಲಿ ದರ್ಶನ ಪಡೆಯಲು ಆಗಮಿಸುತ್ತಾರೆ. ಅವರಿಗೆ ವಾಹನ ಮತ್ತು ಕಾಲ್ನಡಿಗೆ ಬಿಟ್ಟು ಬೇರಾವ ವ್ಯವಸ್ಥೆ ಇಲ್ಲ. ಈ ಕುರಿತು ಜಗದ್ಗುರುಗಳು ಕೇಂದ್ರ ಸರಕಾರದ ಗಮನ ಸೆಳೆದಾಗ ತಕ್ಷಣ ಅವರ ಮಾತಿಗೆ ಮನ್ನಣೆ ನೀಡಿ ರೈಲ್ವೆ ಮಾರ್ಗ ಕಲ್ಪಿಸಿರುವುದು ನಮಗೂ ಹಾಗೂ ಲಕ್ಷಾಂತರ ಭಕ್ತಾಧಿಗಳಿಗೆ ಹರ್ಷ ತಂದಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಸತೀಶ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ ವಾಡೆನ್ನವರ, ಪಿಕೆಪಿಎಸ್ ಅಧ್ಯಕ್ಷ ಅಣ್ಣಯ್ಯಾ ಸಂಬಾಳ ಮತ್ತಿತರರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ