ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ, ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬರುತ್ತಿರುವುದೇ ಸುಳ್ಳು ಹೇಳಲು. ಸುಳ್ಳೇ ಅವರ ಬಂಡವಾಳ. ಮಹದಾಯಿ ಬಗೆಹರಿಸುತ್ತೇವೆ ಅಂದಿದ್ದರು. ಇನ್ನೂ ಸಮಸ್ಯೆ ಬಗೆಹರಿಸಿಲ್ಲ. ರಾಜ್ಯಕ್ಕೆ ನೆರೆ ಪರಿಹಾರವೆಂದು ಕೊಟ್ಟರು ಆದರೆ ಅದು ಯಾವುದಕ್ಕೂ ಸಾಲುತ್ತಿಲ್ಲ ಈ ಬಗ್ಗೆ ಮೊದಲು ಸ್ಪಷ್ಟನೆ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಅಮಿತ್ ಶಾ ರಾಜ್ಯ ಭೇಟಿ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿಎಎ, ಎನ್ಆರ್ಸಿ ಮೂಲಕ ದೇಶ ಒಡೆಯುವ ಕೆಲಸಕ್ಕೆ ಸ್ವಲ್ಪ ವಿರಾಮ ನೀಡಿ. ನೆರೆ ಹಾವಳಿಯಿಂದ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಸಂತ್ರಸ್ತರ ಕಡೆ ಮೊದಲು ಗಮನ ಕೊಡಿ. ಅಮಿತ್ ಶಾ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದಾರಲ್ಲ, ಮೊದಲು ಮಹದಾಯಿ ವಿಚಾರದ ಬಗ್ಗೆ ಹುಬ್ಬಳ್ಳಿಯಲ್ಲಿ ಸ್ಪಷ್ಟನೆ ನೀಡಲಿ. ಬರ, ಬೆಳೆ ಪರಿಹಾರ ನೀಡಿಲ್ಲ, ರೈತರ ಸಂಕಷ್ಟ ಆಲಿಸಿಲ್ಲ ಈ ಬಗ್ಗೆ ಮಾತನಾಡಲಿ ಎಂದು ಆಗ್ರಹಿಸಿದರು.
ಟ್ವಿಟರ್ ನಲ್ಲಿಯೂ ಅಮಿತ್ ಶಾ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಪ್ರವಾಹದಿಂದ 35 ಸಾವಿರ ಕೋಟಿ ನಷ್ಟವಾಗಿದೆ. ಆದರೆ, ಕೇಂದ್ರದಿಂದ ಬಂದಿರುವುದು ಹೆಚ್ಚುವರಿಯಾಗಿ 1.870 ಕೋಟಿ ಅಷ್ಟೇ ಉಳಿದ ಹಣವನ್ನು ಯಾವಾಗ ನೀಡಬೇಕೆಂದು ನಿರ್ಧರಿಸಿದ್ದೀರಾ? ಮೊದಲು ಬಾಕಿ ನೆರೆಪರಿಹಾರ ಪಾವತಿ ನಂತರ ಸಿಎಎ, ಎನ್ ಆರ್ ಸಿ ಬಗ್ಗೆ ಯೋಚಿಸೋಣ ಎಂದಿದ್ದಾರೆ
ಕಳಸಾ- ಬಂಡೂರಿ ಯೋಜನೆಯಲ್ಲಿ ನಿಮ್ಮ ಪಕ್ಷಕ್ಕೆ 2 ನಾಲಿಗೆ ಇದೆ. ಚುನಾವಣೆಯ ಮೊದಲು ನಮ್ಮ ಪರ ಇದ್ದ ನೀವು ಈಗ ಗೋವಾ ಪರವಾಗಿದ್ದೀರಾ. ಯಾಕೆ? ಈ ವಿಚಾರದಲ್ಲಿ ನಿಮ್ಮ ನಿಲುವು ಏನು ಎಂಬ ಬಗ್ಗೆ ಸ್ಪಷ್ಟೀಕರಣ ಕೊಡಿ.
ಸಿಎಎ ಪ್ರತಿಭಟನೆಯಲ್ಲಿ ಮಂಗಳೂರಿನಲ್ಲಿ ಗೋಲಿಬಾರ್ಗೆ ಇಬ್ಬರು ಅಮಾಯಕರು ಸಾವನ್ನಪ್ಪಿದರು. ಅದು ಒಂದು ನಕಲಿ ಎನ್ಕೌಂಟರ್ ಎಂಬುದು ಸಾರ್ವಜನಿಕರ ಮಾತು. ಈ ಬಗ್ಗೆ ನಿಖರ ತನಿಖೆಯಾಗಬೇಕು ಎಂಬುದನ್ನು ನೀವು ಯೋಚಿಸಿಲ್ಲವೇ? ಎಂದು ಪ್ರೆಶ್ನಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ