
ಪ್ರಗತಿವಾಹಿನಿ ಸುದ್ದಿ: ದ್ವಿತೀಯ ಪಿಯುಸಿ ಫಲಿತಾಂಶದ ದಿನವೇ ವಿದ್ಯಾರ್ಥಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ಹೆಬ್ಬಾಳದಲ್ಲಿ ಪಿಯುಸಿ ವಿದ್ಯಾರ್ಥಿನಿ ತನುಶ್ರೀ ಎಂಬಾಕೆ ನಿಗೂಢವಾಗಿ ಮೃತಪಟ್ಟಿದ್ದಾಳೆ. ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಎಂದು ತಾಯಿ ಹೇಳುತ್ತಿದ್ದರೂ, ಪೊಲೀಸರಿಗೆ ಮಾಹಿತಿ ನೀಡಲು 8 ಗಂಟೆ ವಿಳಂಬ ಮಾಡಿರುವುದು ಮತ್ತು ಮೃತದೇಹವನ್ನು ತಾಯಿಯೇ ಇಳಿಸಿರುವುದು ಸಂಬಂಧಿಕರ ಅನುಮಾನಕ್ಕೆ ಕಾರಣವಾಗಿದೆ.
ವಿದ್ಯಾರ್ಥಿನಿ ಸಾವಿನ ಬಗ್ಗೆ ತಾಯಿ ಮೇಲೆ ಅನುಮಾನವಿದ್ದು, ತಾಯಿ ವಿರುದ್ಧವೇ ತನಿಖೆಗೆ ಸಂಬಂಧಿಕರು ಆಗ್ರಹಿಸಿದ್ದಾರೆ. ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಪಿಯುಸಿ ಫಲಿತಾಂಶದಲ್ಲಿ ಅನುತ್ತೀರ್ಣಳಾದ ಕಾರಣ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಆಶಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮೃತದೇಹವನ್ನು ಕೆ.ಜಿ. ಹಳ್ಳಿಯ ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಈ ಪ್ರಕರಣದಲ್ಲಿ ತಾಯಿ ಆಶಾ ಅವರ ನಡೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದ್ದರೂ, ರಾತ್ರಿ 10 ಗಂಟೆಯವರೆಗೂ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಷ್ಟೇ ಅಲ್ಲದೆ, ಪೊಲೀಸರಿಗೆ ತಿಳಿಸದೆಯೇ 4-5 ಯುವಕರ ಸಹಾಯದಿಂದ ತಾಯಿಯೇ ಮೃತದೇಹವನ್ನು ಕೆಳಕ್ಕೆ ಇಳಿಸಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಘಟನೆ ನಡೆದು 8 ಗಂಟೆಗಳ ಕಾಲ ಮಾಹಿತಿ ಮುಚ್ಚಿಟ್ಟಿರುವುದು ಯಾಕೆ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ. ತಾಯಿಯೇ ಮಗಳನ್ನು ಕೊಂದು ನೇಣು ಹಾಕಿರಬಹುದು ಎಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದು, ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ತನುಶ್ರೀ ದಿಡ್ದಮ್ಮನ ಮಗ ಹೇಳುವ ಪ್ರಕಾರ, ತನುಶ್ರೀ ತಾಯಿ ಆಶಾ ನನಗೆ ಚಿಕ್ಕಮ್ಮ ಆಗಬೇಕು. ತನುಶ್ರೀ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿ ಅಲ್ಲ. ಮಾನಸಿಕವಾಗಿ ಬಹಳ ಸ್ಟ್ರಾಂಗ್ ಆಗಿರುವ ಹೆಣ್ಣು ಮಗಳು. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂದರೆ ನಾವು ನಂಬಲ್ಲ ಎಂದಿದ್ದಾನೆ. ನಮಗೆ ಅವಳ ತಾಯಿ ಆಶಾ ಮೇಲೆ ಅನುಮಾನ ಇದೆ. ತನುಶ್ರೀ ತಂದೆ ಎರಡು ವರ್ಷದ ಹಿಂದೆ ಮೃತಪಟ್ಟಿದ್ದರು. ಅವರಪ್ಪ ಸತ್ತಿದ್ದೇ ಚಿಕ್ಕಮ್ಮಳ ಅನೈತಿಕ ಸಂಬಂಧದ ವಿಚಾರ ಗೊತ್ತಾಗಿ. ಈಗಲೂ ಅವರಿಗೆ ಅನೈತಿಕ ಸಂಬಂಧ ಇದೆ ಎಂದು ಆತ ಹೇಳಿದ್ದಾನೆ.
ಚಿಕ್ಕಮ್ಮಳ ಅನೈತಿಕ ಸಂಬಂಧದ ವಿಚಾರವಾಗಿ ಮನೆಯಲ್ಲಿ ಹಲವು ಬಾರಿ ಗಲಾಟೆ ಆಗಿದೆ. ಇದೇ ಕಾರಣಕ್ಕೆ ತನುಶ್ರೀಯನ್ನ ಕೊಲೆ ಮಾಡಿರುವ ಅನುಮಾನ ಇದೆ. ಘಟನೆ ನಡೆದು ಎಂಟತ್ತು ತಾಸಾದರೂ ಮಾಹಿತಿ ನೀಡಿಲ್ಲ. ಆಸ್ಪತ್ರೆಗೆ ಹೋದ ಬಳಿಕ ಅಲ್ಲಿಂದ ಪೊಲೀಸರಿಗೆ ಮಾಹಿತಿ ಹೋಗಿದೆ. ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕು ಎಂದು ಒತ್ತಾಯಿಸಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.



