*ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವೇಳೆ ಬಿಗ್ ಟ್ವಿಸ್ಟ್: ಚುನಾವಣಾಧಿಕಾರಿ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಹೈಕೋರ್ಟ್ ಆದೇಶದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರಿಗಿಂತ ಬಿಜೆಪಿಯ ಜೀವರಾಜ್ ಅವರ ಮತಗಳ ಸಂಖ್ಯೆ ಹೆಚ್ಚಾಗಿದೆ. ಗೆಲುವಿನ ಬಗ್ಗೆ ಚುನಾವಣಾ ಆಯೋಗ ಅಧಿಕ್ರಿತ ಘೋಷಣೆ ಮಾತ್ರ ಬಾಕಿಯಿದೆ.
ಮತ ಎಣಿಕೆ ಬಳಿಕ ಮಾತನಾಡಿದ ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಟ್ಯಾಂಪರಿಂಗ್ ಆರೋಪಗಳಿಗೆ ಪ್ರತಿಕ್ರಿಯಿಸಿ ಆ ಆರೋಪಗಳು ಕ್ರಿಮಿನಲ್ ಅಪರಾಧ ವ್ಯಾಪ್ತಿಗೆ ಬರುತ್ತಿದ್ದು, ರಿಟರ್ನಿಂಗ್ ಆಫೀಸರ್ ಆಗಿ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ವ್ಯಾಪ್ತಿ ಕೇವಲ ಅಂಚೆ ಮತಪತ್ರಗಳ ಮರು ಪರಿಶೀಲನೆ ಮತ್ತು ಮರು ಎಣಿಕೆಗೆ ಸೀಮಿತವಾಗಿದೆ ಎಂದು ತಿಳಿಸಿದ್ದಾರೆ.
ಹೈಕೋರ್ಟ್ ನಿರ್ದೇಶನದಂತೆ 279 ತಿರಸ್ಕೃತ ಮತಗಳನ್ನು ಮರು ಪರಿಶೀಲನೆ ಮಾಡಲಾಗಿದೆ. ಅಲ್ಲದೆ, 1543 ಮತಗಳನ್ನು ಮರು ಎಣಿಕೆ ಮಾಡಲಾಗಿದ್ದು, ಮರು ಪರಿಶೀಲನೆಯಲ್ಲಿ ಮಾನ್ಯ ಎಂದು ಕಂಡುಬಂದ ತಿರಸ್ಕೃತ ಮತಗಳನ್ನೂ ಎಣಿಕೆಗೆ ಪರಿಗಣಿಸಲಾಗಿದೆ. ಮತಗಳನ್ನು ಮಾನ್ಯ ಮಾಡುವುದು ಅಥವಾ ಅಮಾನ್ಯ ಮಾಡುವುದು ಚುನಾವಣಾ ಆಯೋಗದ ಹ್ಯಾಂಡ್‌ಬುಕ್ ಮತ್ತು ಕಾಯ್ದೆಗಳ ಪ್ರಕಾರ ನಡೆಯುತ್ತದೆ ಎಂದು ಹೇಳಿದ್ದಾರೆ. ಹಿಂದೆ ಮಾನ್ಯವಾಗಿದ್ದ ಕೆಲವು ಮತಗಳು ಈಗ ಅಮಾನ್ಯವಾಗಿರುವುದಕ್ಕೆ ಇದು ಕಾರಣ. 12 ಮತಗಳ ನಾಪತ್ತೆಯ ಕುರಿತು ಪ್ರತಿಕ್ರಿಯಿಸಲು ತಮಗೆ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ.
ಮರು ಎಣಿಕೆಯ ನಂತರ ಅಭ್ಯರ್ಥಿಗಳ ಮತಗಳಲ್ಲಿ ಬದಲಾವಣೆಗಳು ಆಗಿವೆ. 2023 ರ ಮತ ಎಣಿಕೆಯಲ್ಲಿ ಮೇಲ್ಮನವಿದಾರ ಡಿ ಎನ್ ಜೀವರಾಜ್ ಅವರಿಗೆ 692 ಮತಗಳು ಬಂದಿದ್ದರೆ, ಮರು ಎಣಿಕೆಯ ನಂತರ ಅದು 690 ಕ್ಕೆ ಇಳಿದಿದೆ. ಇನ್ನು, ಎದುರುದಾರ ಟಿ ಡಿ ರಾಜೇಗೌಡರಿಗೆ ಮೂಲತಃ 569 ಮತಗಳು ಬಂದಿದ್ದವು. ಆದರೆ ಮರು ಎಣಿಕೆಯ ನಂತರ ಅವರ ಮತಗಳ ಸಂಖ್ಯೆ 314 ಕ್ಕೆ ಇಳಿದು 255 ಮತಗಳ ವ್ಯತ್ಯಾಸವಾಗಿದೆ. ಈ ಕುರಿತು ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.


