LatestNationalPolitics

*ದೇಶದಲ್ಲೇ ಕಾಂಗ್ರೆಸ್ ಅಸ್ತಿತ್ವ ಶೂನ್ಯ; ಮುಂದೆ ಕರ್ನಾಟಕದಲ್ಲೂ ಮನೆಗೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭವಿಷ್ಯ*

ಪ್ರಗತಿವಾಹಿನಿ ಸುದ್ದಿ: “ಕೇರಳ ಬಿಟ್ಟರೆ ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಶೂನ್ಯ. ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿಯೂ ಇದೇ ಸ್ಥಿತಿ ಎದುರಾಗಲಿದೆ” ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಭವಿಷ್ಯ ನುಡಿದರು.

ದೆಹಲಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪಂಚರಾಜ್ಯ ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯಿಸಿ, ದುರಾಡಳಿತ, ಮಿತಿಮೀರಿದ ತುಷ್ಟೀಕರಣ, ಭ್ರಷ್ಟಾಚಾರ, ಗೂಂಡಾಗಿರಿ ವಿರುದ್ಧ ಅತ್ಯಂತ ಸ್ಪಷ್ಟ ಜನಾದೇಶ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA-BJP ಆಡಳಿತಕ್ಕೆ ಬಹುದೊಡ್ಡ ಗೆಲುವು ತಂದುಕೊಟ್ಟಿದ್ದಾರೆಂದು ಹೇಳಿದರು.

ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೆರಿಯಲ್ಲಿ NDAಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಮೋದಿ ಅವರ 12 ವರ್ಷಗಳ ಸಮರ್ಥ ಆಡಳಿತ, ಅದ್ಭುತ ಕಾರ್ಯ ಕಂಡು ಬಿಜೆಪಿಗೆ ಮನ್ನಣೆ ನೀಡಿದ್ದಾರೆ. ಕೇರಳದಲ್ಲಿ ನಮಗೆ ಯಶಸ್ಸು ಸಿಕ್ಕಿಲ್ಲ. ಆದರೆ, ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಮುಕ್ತವಾಗಿದೆ ಎಂದು ವ್ಯಾಖ್ಯಾನಿಸಿದರು.

ದೇಶಾದ್ಯಂತ ಕಾಂಗ್ರೆಸ್ ಶೂನ್ಯ: ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ದೇಶಾದ್ಯಂತ ಶೂನ್ಯಕ್ಕೆ ತಳ್ಳಲ್ಪಟ್ಟಿದೆ. ಕೇರಳ ಬಿಟ್ಟರೆ ಬೇರೆಲ್ಲೆಡೆ ಅಸ್ತಿತ್ವ ಕಳೆದುಕೊಂಡಿದೆ. ಪಶ್ಚಿಮ ಬಂಗಾಳ-0, ತಮಿಳುನಾಡು-0, ಅಸ್ಸಾಂ-22-24 ಸ್ಥಾನ ಗೆದ್ದಿದೆ ಅಷ್ಟೇ. ಕಾಂಗ್ರೆಸ್ ನ ತುಷ್ಟೀಕರಣದ ಪರಮಾವಧಿ, ಭ್ರಷ್ಟಾಚಾರ, ಬಹುಸಂಖ್ಯಾತ ಹಿಂದೂಗಳ ತಿರಸ್ಕಾರ, ವೋಟ್ ಬ್ಯಾಂಕ್ ರಾಜಕಾರಣಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಜೋಶಿ ವಿಶ್ಲೇಷಿಸಿದರು.

Home add -Advt

ತಮಿಳುನಾಡಲ್ಲಿ ವಿಜಯ್ ಜತೆ ಹೋಗುತ್ತೇವೆ ಎಂದಿದ್ದಾರೆ. ಅಲ್ಲಿ ಹೋಗಲು ಅವರಲ್ಲೇನೂ ಉಳಿದಿಲ್ಲ. ಇನ್ನೇನು ಹೋಗುತ್ತಾರೆ? ಇನ್ನು ಕೇರಳದಲ್ಲಿ ದೇಶ ಇಬ್ಭಾಗ ಮಾಡುವ ಮನಸ್ಥಿತಿಯ ಮುಸ್ಲಿಂ ಲೀಗ್ ಜತೆ ಒಪ್ಪಂದದೊಂದಿಗೆ ಹಿಂದೂ ವಿರೋಧಿಯಾಗಿ ವರ್ತಿಸಿದ್ದರ ಪರಿಣಾಮ ದೇಶದೆಲ್ಲೆಡೆಯೂ ಕಾಂಗ್ರೆಸ್ ಧೂಳೀಪಟವಾಗಿದೆ ಎಂದು ಟೀಕಿಸಿದರು.

ಪ್ರಧಾನಿ ನಿಂದನೆ ಮುಳುವು; ಕಾಂಗ್ರೆಸ್ ಇಷ್ಟರ ಮಟ್ಟಿಗೆ ನೆಲಕಚ್ಚಲು ಸದಾ ನೆಗೆಟಿವ್ ಪ್ರಚಾರ, ಪ್ರಧಾನಿ ಮೋದಿ ಅವರ ನಿಂದನೆಯಲ್ಲಿ ತೊಡಗಿದ್ದೇ ಮುಳುವಾಗಿದೆ. ಜನಪ್ರಿಯ ಪ್ರಧಾನಿ ಅವರನ್ನು ವಿಷಸರ್ಪ, ಟೆರರಿಸ್ಟ್ ಎಂದೆಲ್ಲಾ ನಿಂದಿಸಿತ್ತು. ಜನ ಅದಕ್ಕೆಲ್ಲ ತಕ್ಕ ಉತ್ತರ ಕೊಟ್ಟಿದ್ದಾರೆ. ಅನಾಗರಿಕ ರಾಜಕೀಯ ಸಂಸ್ಕೃತಿ, ರೌಡಿಸಂ, ತುಷ್ಟೀಕರಣ, ಹಿಂದೂ ವಿರೋಧಿ ನಡೆ ಒಪ್ಪುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ, ಎಚ್ಚರಿಕೆ ಕೊಟ್ಟಿದ್ದಾರೆ ಎಂದರು.

ಪಶ್ಚಿಮ ಬಂಗಾಳದಲ್ಲಿ ಜನ ಹೊರಬಂದು ಮತದಾನಕ್ಕೂ ಹೆದರುತ್ತಿದ್ದರು. ನಾಮಿನೇಷನ್ ಗೂ ಬಿಡುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ರೌಡಿಸಂ ಇತ್ತು. ಆದರೆ, ಕಟ್ಟುನಿಟ್ಟಿನ ಕಾನೂನು ಸುವ್ಯವಸ್ಥೆ ರೂಪಿಸಿದ್ದರ ಪರಿಣಾಮ ಇಂದು ಜನ ಧೈರ್ಯದಿಂದ ಮತದಾನ ಮಾಡಿದ್ದಾರೆ. ರೌಡಿಸಂ ಮೆಟ್ಟಿ ನಿಂತು ಚುನಾವಣೆಯಲ್ಲಿ ಭಾಗಿಯಾದರು. ಇದಕ್ಕಾಗಿ ಅಲ್ಲಿನ ಜನಕ್ಕೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕರ್ನಾಟಕದಲ್ಲೂ ಮನೆಗೆ ಕಳಿಸ್ತಾರೆ: ಕರ್ನಾಟಕದಲ್ಲಿ ಕಾಂಗ್ರೆಸ್ ದುರಾಡಳಿತ, ಭ್ರಷ್ಟಾಚಾರ, ತುಷ್ಟೀಕರಣ ಪರಾಕಾಷ್ಠೆ ಮಿತಿಮೀರಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಜನರೂ ಕಾಂಗ್ರೆಸ್ ಅನ್ನು ಮನೆಗೆ ಕಳಿಸುತ್ತಾರೆ ಎಂದು ಸಚಿವರು ಇದೇ ವೇಳೆ ಭವಿಷ್ಯ ನುಡಿದರು.

ತಡರಾತ್ರಿ ಕೊಟ್ಟಿದ್ದಾರೆ ಫಲಿತಾಂಶ: ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮತ ಮರು ಎಣಿಕೆ ಫಲಿತಾಂಶವನ್ನು ಲೀಗಲ್ ನೋಟಿಸ್ ಜಾರಿ ಮಾಡಿದ ಬಳಿಕ ರಾತ್ರೋರಾತ್ರಿ ಈ ಮೇಲ್ ಅಲ್ಲಿ ಫಲಿತಾಂಶದ ಪತ್ರ ರವಾನಿಸಿದ್ದಾರೆ. ಪಕ್ಷದ ಬೆಂಬಲದಿಂದ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು ನಡೆಸಿದ ಸತತ ಹೋರಾಟ ಮತ್ತು ನ್ಯಾಯಕ್ಕೆ ಸಂದ ಜಯ ಇದಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.

ಡಿಸಿಎಂ ಬೇಜವಾಬ್ದಾರಿ ಹೇಳಿಕೆ: ಕಳೆದ ಮೂರು ವರ್ಷದಿಂದ ಕಾಂಗ್ರೆಸ್ ಸರ್ಕಾರವೇ ಇದೆ. ಕೋಲಾರದಲ್ಲಿ ಕಾಂಗ್ರೆಸ್ ಗೆದ್ದರೆ ಸಂಭ್ರಮಿಸಿದರು. ಶೃಂಗೇರಿಯಲ್ಲಿ ಬಿಜೆಪಿ ಗೆದ್ದರೆ ಕ್ಷುಲ್ಲಕ ಆರೋಪ ಮಾಡುತ್ತಾರೆ. ಹಾಗಾದರೆ, ಇಲ್ಲಾದ ಮತ ಎಣಿಕೆ ಲೋಪಕ್ಕೆ AC, DC ಅವರನ್ನು ಸಸ್ಪೆಂಡ್ ಮಾಡುತ್ತಾರೆಯೇ? ಎಂದು ಪ್ರಶ್ನಿಸಿದರು ಸಚಿವ ಪ್ರಲ್ಹಾದ ಜೋಶಿ.

Related Articles

Back to top button