ಪ್ರಗತಿವಾಹಿನಿ ಸುದ್ದಿ; ಬೀಜಿಂಗ್/ಬೆಂಗಳೂರು: ಚೀನಾದಲ್ಲಿ ಮಹಾಮಾರಿಯಾಗಿ ಹರಡುತ್ತಿರುವ ಕರೋನಾ ವೈರಸ್ ಗೆ 25 ಜನರು ಬಲಿಯಾಗಿದ್ದು, ವೈರಸ್ ತಗುಲಿರುವ 830 ಪ್ರಕರಣ ಬೆಳಕಿಗೆ ಬಂದಿದೆ. ಚೀನಾದಲ್ಲಿ ಹಬ್ಬಿರುವ ಕರೋನಾ ವೈರಸ್ ಸೋಂಕು ಭಾರತಕ್ಕೂ ಪ್ರವೇಶಿಸುವ ಭಿತಿಯುಂಟಾಗಿದೆ. ಈಗಾಗಲೇ ನೆರೆಯ ನೇಪಾಳದಲ್ಲೂ ಕರೋನಾ ಸೋಂಕು ಪತ್ತೆಯಾಗಿದ್ದು, ದೇಶದಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಲು ಕಾರಣವಾಗಿದೆ.
ವಿಶ್ವದ ಎಲ್ಲ ಭಾಗಗಳಿಂದಲೂ ಸಂಪರ್ಕ ಹೊಂದಿರುವ ದೆಹಲಿ, ಮುಂಬೈ ಮತ್ತು ಬೆಂಗಳೂರು ಮಹಾನಗರಗಳಿಗೆ ಅಪಾಯ ಹೆಚ್ಚಿದೆ. ಈಗಾಗಲೇ ಮುಂಬೈನಲ್ಲಿ ಇಬ್ಬರು ವ್ಯಕ್ತಿಗಳಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಆಸ್ಪತ್ರೆಗಳಲ್ಲಿ ಸೋಂಕು ತಪಾಸಣೆ ಹಾಗೂ ಚಿಕಿತ್ಸೆಗೆ ಸೌಲಭ್ಯ ಕಲ್ಪಿಸಲಾಗಿದೆ. ಶ್ವಾಸಕೋಶದ ಮೇಲೆ ದಾಳಿ ಮಾಡಿ ಉಸಿರಾಟಕ್ಕೆ ತೊಂದರೆ ಉಂಟು ಮಾಡುವ ಈ ವೈರಸ್ ಸೋಂಕು ಸ್ಪರ್ಷದಿಂದ ಹಸ್ತಲಾಘವ, ಉಸಿರಾಟದಿಂದಲೂ ವೇಗಾವಾಗಿ ಹರಡುತ್ತಿದೆ.
ಸೋಂಕು ತಡೆಯಲು ಬೆಂಗಳೂರಿನ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸೋಂಕು ಪತ್ತೆ ಮಾಡುವ ಕುರಿತು ಏರ್‌ಪೋರ್ಟ್ ಹಾಗೂ ಬಂದರಿನಲ್ಲಿ ಯಾವುದೇ ವ್ಯವಸ್ಥೆ ಮಾಡಿಲ್ಲ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿಲ್ಲ. ಆದರೆ ಶೀತ, ನ್ಯುಮೋನಿಯಾ ಕಂಡು ಬಂದರೆ ಕೂಡಲೇ ವೈದ್ಯರಲ್ಲಿಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು. ಚೀನಾದಿಂದ ಭಾರತಕ್ಕೆ ಬಂದ ಪ್ರಯಾಣಿಕರು ನೆಗಡಿ, ಜ್ವರ ಕಾಣಿಸಿಕೊಂಡರೆ ತಪಾಸಣೆ ಮಾಡಿಸಿಕೊಂಡು ಸೋಂಕಿನ ಕುರಿತು ಖಚಿತಪಡಿಸಿಕೊಳ್ಳಬೇಕು ಎಂದು ಇಲಾಖೆ ಮನವಿ ಮಾಡಿದೆ. ವೈರಸ್ ಸೋಂಕಿನ ಕುರಿತ ಮಾಹಿತಿಗೆ 080-22208541, 22374658 ಸಂಪರ್ಕಿಸಬಹುದು.
ಕರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರಮುಖವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ವಿಮಾನ ನಿಲ್ದಾಣದಲ್ಲಿ ಹೊರಭಾಗಗಳಿಂದ ಬರುವ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲು ನುರಿತ ತಜ್ಞರ ತಂಡವನ್ನು ನಿಯೋಜನೆ ಮಾಡಲಾಗಿದೆ. ದಿನದ 24 ಗಂಟೆಯೂ ಈ ತಜ್ಞರು ಕಾರ್ಯ ನಿರ್ವಹಿಸಲು ದೇಶ, ವಿದೇಶಗಳಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರನ್ನ ತಪಾಸಣೆಗೊಳಪಡಿಸಿ ಕರೋನ ವೈರಸ್ ಸೋಂಕಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ