
ಪ್ರಗತಿವಾಹಿನಿ ಸುದ್ದಿ: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಕಾರು ಚಾಲಕನ ನಿಯಂತ್ರಣತಪ್ಪಿ 500 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 8 ಜನರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಚುರಾಹ್ ಉಪವಿಭಾಗದಲ್ಲಿ ಈ ದುರಂತ ಸಂಭವಿಸಿದೆ. ಇಲ್ಲಿನ ಬೈರಗಢ್–ಸಚ್ ಪಾಸ್–ಕಿಲ್ಲರ್ ಮಾರ್ಗದಲ್ಲಿ ಕಾರು ಭೀಕರ ಅಪಘಾತಕ್ಕೀಡಾಗಿದೆ.
ದುರಂತದಲ್ಲಿ ಕಾರಲ್ಲಿದ್ದ 8 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಮದಿಂದ ಆವೃತವಾಗಿರುವ ಸಚ್ ಪಾಸ್ ಪ್ರದೇಶದತ್ತ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ ಬೆಂಗಳೂರಿನಿಂದ ಬಂದಿದ್ದ ಒಂದು ಪ್ರವಾಸಿ ಕುಟುಂಬ ಡಲ್‌ಹೌಸಿ ಪ್ರವಾಸಕ್ಕಾಗಿ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದಿತ್ತು. ಈ ಕುಟುಂಬವು ಡಲ್‌ಹೌಸಿಯಲ್ಲಿ ತಂಗಿದ್ದ ಮತ್ತೊಂದು ಪ್ರವಾಸಿ ಕುಟುಂಬದೊಂದಿಗೆ ವಾಹನವನ್ನು ಹಂಚಿಕೊಂಡು ಸಚ್ ಪಾಸ್‌ನ ಹಿಮಾಚ್ಛಾದಿತ ಪ್ರದೇಶಗಳಿಗೆ ಪ್ರವಾಸಕ್ಕೆ ತೆರಳಿತ್ತು. ಚಾಲಕ ಸೇರಿದಂತೆ ವಾಹನದಲ್ಲಿ ಒಟ್ಟು ಒಂಬತ್ತು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಅವರಲ್ಲಿ ಇಬ್ಬರು ಮಕ್ಕಳು ಕೂಡ ಇದ್ದರು.
ಘಟನೆ ಸಂಭವಿಸಿದ ಸ್ಥಳ ದುರ್ಗಮ ಪ್ರದೇಶವಾಗಿದ್ದು, ಕಡಿದಾದ ಇಳಿಜಾರುಗಳಿರುವ ಕಾರಣ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಗಿದೆ. ಪೊಲೀಸ್ ಹಾಗೂ ಆಡಳಿತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಪಘಾತದ ಕಾರಣಗಳ ಕುರಿತು ತನಿಖೆ ಆರಂಭಿಸಿದ್ದಾರೆ.




