
ಪ್ರಗತಿವಾಹಿನಿ ಸುದ್ದಿ: ಪತ್ನಿ ತನ್ನನ್ನು ಬಿಟ್ಟು ಬೇರೊಬ್ಬನ ಜತೆ ಓಡಿಹೋಗಿದ್ದಕ್ಕೆ ವ್ಯಕ್ತಿ ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ತಮಿಳುನಾಡಿನ ಟೂಟಿಕೋರಿನ್ ಜಿಲ್ಲೆಯ ಪುದುಕೊಟ್ಟೆ ಸಮೀಪದ ಸವೇರಿಯಾರ್‌ಪುರಂನಲ್ಲಿ ಈ ಘಟನೆ ನಡೆದಿದೆ. ಲಾರಿ ಚಾಲಕನಾಗಿದ್ದ ಮೇರಿ ಮೈಕೆಲ್, ತನ್ನ ಪುತ್ರಿ ಮೇರಿ ನಿರೋಷಾ (14) ಹಾಗೂ ಪುತ್ರ ಮೇರಿ ಕೆನಿಸ್ಟನ್ (12) ಗೆ ಶಾಕ್ ನೀಡಿ ಸಾಯಿಸಿದ್ದಾನೆ.
ಮೈಕೆಲ್ ಪತ್ನಿ ಸುಮಾರು ಆರು ತಿಂಗಳ ಹಿಂದೆಯಷ್ಟೇ ತನ್ನನ್ನು ಮತ್ತು ಮಕ್ಕಳನ್ನು ತೊರೆದು ಪರಪುರುಷನ ಜತೆ ವಾಸಿಸಲು ಆರಂಭಿಸಿದ್ದಳು ಎನ್ನಲಾಗಿದೆ. ಪತ್ನಿಯ ಈ ನಡವಳಿಕೆಯಿಂದ ತೀವ್ರವಾಗಿ ನೊಂದಿದ್ದ ಮೈಕೆಲ್, ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಈ ಚಿಂತೆಯಲ್ಲೇ ಆತ ಕಳೆದ ಕೆಲವು ತಿಂಗಳುಗಳಿಂದ ಕೆಲಸಕ್ಕೂ ಹೋಗದೆ ಮನೆಯಲ್ಲೇ ಉಳಿದಿದ್ದನು.
ಆದರೆ ಏಕಾಏಕಿ ಮೈಕೆಲ್ ಈ ವಿಪರೀತ ನಿರ್ಧಾರಕ್ಕೆ ಬಂದಿದ್ದಾನೆ. ನಿದ್ದೆಯಲ್ಲಿದ್ದ ಮಕ್ಕಳ ದೇಹಕ್ಕೆ ವಿದ್ಯುತ್ ತಂತಿಗಳನ್ನು ಸುತ್ತಿ ಕರೆಂಟ್ ಶಾಕ್ ನೀಡಿ ಕೊಂದಿದ್ದಾನೆ. ಮಕ್ಕಳು ಮೃತಪಟ್ಟ ಬಳಿಕ, ತಾನೂ ಅದೇ ತಂತಿಯಿಂದ ವಿದ್ಯುತ್ ಪ್ರವಹಿಸಿಕೊಂಡು ಪ್ರಾಣ ಬಿಟ್ಟಿದ್ದಾನೆ.
ಮೈಕೆಲ್ ಅವರ 75 ವರ್ಷದ ವೃದ್ಧ ತಂದೆ ಆಂಥೋನಿ ಮುತ್ತು ಅವರು ಎಂದಿನಂತೆ ಮನೆಯ ಹೊರಗಡೆ ಮಲಗಿದ್ದರು. ಮರು ದಿನ ಮಧ್ಯಾಹ್ನವಾದರೂ ಮನೆಯ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಅವರು, ತಕ್ಷಣವೇ ನೆರೆಹೊರೆಯವರ ಗಮನಕ್ಕೆ ತಂದಿದ್ದಾರೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಪುದುಕೊಟ್ಟೆ ಪೊಲೀಸರು ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದ್ದಾರೆ. ಈ ವೇಳೆ ಹಾಸಿಗೆಯ ಮೇಲೆ ಮೂವರ ಮೃತದೇಹಗಳು ವಿದ್ಯುತ್ ತಂತಿ ಸುತ್ತಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಟೂಟಿಕೋರಿನ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
