Latest

ಮಾರ್ಕ್ಸವಾದಿಗಳಾಗಬೇಡಿ, ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಿ -ಶ್ರೀರಂಗ ಕಟ್ಟಿ

ಪ್ರಗತಿವಾಹಿನಿ ಸುದ್ದಿ, ಯಲ್ಲಾಪುರ- ವಿದ್ಯಾರ್ಥಿಗಳು ಅಂಕಗಳ ಬೆನ್ನತ್ತಿ ಜೀವನ ಹಾಳು ಮಾಡಿಕೊಳ್ಳುವಂತಾಗಬಾರದು. ಪಾಲಕರು ಮಕ್ಕಳ ಆಸಕ್ತಿ ಗಮನಿಸಿ ಪ್ರೋತ್ಸಾಹಿಸಬೇಕೇ ವಿನಃ ಒತ್ತಾಯಪೂರ್ವಕವಾಗಿ ಯಾವುದನ್ನೂ ಹೇರಬಾರದು ಎಂದು ನಿವೃತ್ತ ಪ್ರಾಚಾರ್ಯ, ಹಿರಿಯ ಪತ್ರಕರ್ತ ಶ್ರೀರಂಗ ಕಟ್ಟಿ ಸಲಹೆ ನೀಡಿದ್ದಾರೆ.
ಯಲ್ಲಾಪುರ ತಾಲೂಕಿನ ಉಮ್ಮಚ್ಗಿಯ ಮನಸ್ವಿನಿ ವಿದ್ಯಾನಿಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗಿಂತ ಸಾಮಾನ್ಯ ವಿದ್ಯಾರ್ಥಿಗಳೇ ಜೀವನದಲ್ಲಿ ಹೆಚ್ಚು ಯಶಸ್ಸು ಸಾಧಿಸಿದ್ದನ್ನು ನೋಡಿದ್ದೇನೆ. ಮಕ್ಕಳು ಆಟವಾಡುತ್ತ, ಕುಣಿಯುತ್ತ, ಎಲ್ಲರೊಂದಿಗೆ ಒಂದಾಗಿ ಬೆಳೆಯಬೇಕು. ಕೇವಲ ಓದಿಗೆ ಸೀಮಿತರಾದರೆ ಜೀವನದಲ್ಲಿ ಯಶಸ್ವಿಯಾಗುವುದು ಕಷ್ಟವಾಗುತ್ತದೆ. ಮಕ್ಕಳಿಗೆ ಹೆಚ್ಚಿನ ಮಾರ್ಕ್ಸ್ ತೆಗೆಯುವಂತೆ ಒತ್ತಾಯಿಸುವ ಪಾಲಕರು ತಾವು ಎಷ್ಟು ಅಂಕ ಪಡೆದಿದ್ದೇವೆ ಎನ್ನುವುದನ್ನು ಮೆಲುಕು ಹಾಕಿಕೊಳ್ಳಬೇಕು ಎಂದು ಅವರು ಹೇಳಿದರು.
ಮಾತೃಭಾಷೆಯಷ್ಟು ಪರಿಣಾಮಕಾರಿಯಾಗಿ ಮಕ್ಕಳು ತಮ್ಮ ಭಾವನೆಗಳನ್ನು ಬೇರೆ ಯಾವುದೇ ಭಾಷೆಯಲ್ಲಿ ಹೇಳಲು ಸಾಧ್ಯವಿಲ್ಲ. ಹಾಗಾಗಿ  ಇಂಗ್ಲೀಷನ್ನು ಭಾಷೆಯಾಗಿ ಕಲಿಸಬೇಕೇ ವಿನಃ ಅದನ್ನು ಮಕ್ಕಳಿಗೆ ಹೇರಬಾರದು ಎಂದೂ ಕಟ್ಟಿ ಹೇಳಿದರು.
ಬದುಕಿನ ಪಾಠ ಕಲಿಸಿ
ಇನ್ನೋರ್ವ ಮುಖ್ಯ ಅತಿಥಿ ಹಿರಿಯ ಪತ್ರಕರ್ತ, ಪ್ರಗತಿವಾಹಿನಿ ಸಂಪಾದಕ ಎಂ.ಕೆ.ಹೆಗಡೆ  ಮಾತನಾಡಿ,  ಅತಿಯಾದ ಪ್ರೀತಿಯಿಂದ ಬೆಳೆಸುವುದರಿಂದ ಮಕ್ಕಳು ಮುಂದೆ ಸಣ್ಣ ಕಷ್ಟಗಳನ್ನೂ ಎದುರಿಸಲಾಗದಂತಹ ಸ್ಥಿತಿ ತಲುಪುತ್ತಾರೆ. ಹಾಗಾಗಿ  ಮಕ್ಕಳಿಗೆ ಬದುಕಿನ ಪಾಠ ಕಲಿಸಬೇಕು.ಸ್ವಲ್ಪಮಟ್ಟಿನ ಶಿಕ್ಷೆಯೊಂದಿಗೆ ಶಿಕ್ಷಣ ನೀಡುವ ಸ್ವಾತಂತ್ರ್ಯವನ್ನು ಶಿಕ್ಷಕರಿಗೆ ನೀಡಬೇಕು. ಆಗ ಮಾತ್ರ ಮಕ್ಕಳು ಜೀವನದ ಯಾತ್ರೆಯಲ್ಲಿ ಯಶಸ್ವಿಯಾಗುತ್ತಾರೆ ಎಂದರು.
ಉಮ್ಮಚ್ಗಿಯಂತಹ ಸಣ್ಣ ಊರಿನಲ್ಲಿ ಅತ್ಯಾಧುನಿಕವಾದ ಶಾಲೆಯನ್ನು ಆರಂಭಿಸಿರುವ ರೇಖಾ ಭಟ್ ಕೋಟೆಮನೆಯವರ ಕಾರ್ಯವನ್ನು ಶ್ಲಾಘಿಸಿದ ಅವರು, ಸಾಂಸ್ಕೃತಿಕ, ಸಾಹಿತ್ಯ ಪ್ರಜ್ಞೆಯುಳ್ಳವರು ಹಣದ ಬೆನ್ನತ್ತಿ ಹೋಗುವುದಿಲ್ಲ. ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದಿರುವ ರೇಖಾ ಭಟ್ ಅವರು ಹಣಕ್ಕಾಗಿ ಶಾಲೆ ಮಾಡದೆ ಸಮಾಜದ ಹಿತದೃಷ್ಟಿ ಇಟ್ಟುಕೊಂಡು ಶಾಲೆಯನ್ನು ಕಟ್ಟಿದ್ದಾರೆ. ಶಿಕ್ಷಣ ಸಂಸ್ಥೆಗಳು ಬೆಳೆದರೆ ಆ ಪ್ರದೇಶವೂ ತನ್ನಿಂದ ತಾನೇ ಬೆಳವಣಿಗೆ ಹೊಂದುತ್ತವೆ. ಹಾಗಾಗಿ ತಮ್ಮದೇ ಸಂಸ್ಥೆ ಎನ್ನುವ ರೀತಿಯಲ್ಲಿ ಈ ಭಾಗದ ಜನರು ಸಹಕಾರ ನೀಡಬೇಕು ಎಂದು ಅವರು ವಿನಂತಿಸಿದರು.
ಮತ್ತೊರ್ವ ಅತಿಥಿ, ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ ಮಾತನಾಡಿ,  ಮನಸ್ವಿನಿ ವಿದ್ಯಾನಿಲಯದ ಮುಖಾಂತರ ರೇಖಾ ಭಟ್  ಸಮಾಜಕ್ಕೆ ದೊಡ್ಡ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.
ಹಿರಿಯ ಭಾಷಾಂತರ ತಜ್ಞ ಎ.ವಿ.ಚಿತ್ತರಂಜನ ದಾಸ್ ಸಮ್ಮೇಳನ ಉದ್ಘಾಟಿಸಿದರು. ಇಂದು ಗ್ರಾಮ ಮತ್ತು ನಗರ ಹತ್ತಿರವಾಗುತ್ತಿದೆ. ನಮ್ಮ ಗ್ರಾಮದಲ್ಲೇ ಇದ್ದು ಕಲಿಯುವುದರಿಂದ ಗ್ರಾಮಗಳು ವೃದ್ದಾಶ್ರಮಗಳಾಗುವುದನ್ನು ತಪ್ಪಿಸಬಹುದು ಎಂದರು.
ರೇಖಾ ಭಟ್ ಅವರು ಬಹಳ ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ. ಅವರ ಯೋಜನೆ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಗ.ರಾ.ಭಟ್, ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ಹೆಗಡೆ, ಗಣಪತಿ ಭಟ್ ಕೋಟೆಮನೆ, ಸಂಸ್ಥೆಯ ಅಧ್ಯಕ್ಷೆ ರೇಖಾ ಭಟ್ ಕೋಟೆಮನೆ ಉಪಸ್ಥಿತರಿದ್ದರು.
ವಿಘ್ನೇಶ್ವರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸವಿತಾ ಹೆಗಡೆ ವರದಿ ಓದಿದರು. ಶಾಲೆಯ ಮಕ್ಕಳು ಪ್ರಾರ್ಥನೆ ಹಾಡಿದರು. ನಂತರ ಮಕ್ಕಳಿಂದ ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button