
ಪ್ರಗತಿವಾಹಿನಿ ಸುದ್ದಿ: ಎಸ್ಬಿಐ ಬ್ಯಾಂಕ್ ಉದ್ಯೋಗಿಗಳಾಗಿದ್ದ ಜೋಡಿ ಮೃತ ಪಟ್ಟಿರುವ ಘಟನೆ ನಡೆದಿದೆ.
ಕಾಸರಗೋಡು ಪೂಚ್ಚಕ್ಕಾಡ್ ನಿವಾಸಿ ಪಿ. ಅನುಶ್ರೀ (25) ಮತ್ತು ಕಣ್ಣೂರು ಅಂಬಲತ್ತಟ್ಟು ನಿವಾಸಿ ವಿ. ಅಮಲ್ (27) ಮೃತಪಟ್ಟ ದುರದೃಷ್ಟಕರ ಜೋಡಿಯಾಗಿದ್ದಾರೆ.
ಬ್ಯಾಂಕ್ ಉದ್ಯೋಗಿಗಳಾಗಿದ್ದ ಮೃತರಿಬ್ಬರೂ ಎಸ್ಬಿಐ ಉದ್ಯೋಗಿಗಳಾಗಿದ್ದು, ಅನುಶ್ರೀ ಅವರು ಕರ್ನಾಟಕದ ಮೈಸೂರು ಜಿಲ್ಲೆಯ ಹುಣಸೂರು ಶಾಖೆಯಲ್ಲಿ ಮತ್ತು ಅಮಲ್ ಎರ್ನಾಕುಲಂನ ಎಸ್ಬಿಐ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇಬ್ಬರ ಕುಟುಂಬಸ್ಥರು ಪರಸ್ಪರ ಮಾತುಕತೆ ನಡೆಸಿ, ಮುಂದಿನ ವರ್ಷ ಡಿಸೆಂಬರ್ 26 ರಂದು ಮದುವೆ ಮಾಡಲು ದಿನಾಂಕ ನಿಗದಿಪಡಿಸಿದ್ದರು.
ಮಂಗಳವಾರ ಅನುಶ್ರೀ ಅವರು ಹುಣಸೂರಿನ ತಮ್ಮ ಕೊಠಡಿಯಲ್ಲಿ ಫೋನ್ ಕಾಲ್ ಮಾತನಾಡುತ್ತಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಭಾವಿ ಪತ್ನಿಯ ಈ ಆಘಾತಕಾರಿ ಸಾವು ತಿಳಿಯುತ್ತಿದ್ದಂತೆಯೇ ತೀವ್ರ ಮನನೊಂದ ಅಮಲ್, ಕೇರಳದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಹುಣಸೂರು ಮತ್ತು ಕೇರಳ ಪೊಲೀಸರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮದುವೆಯಾಗಬೇಕಿದ್ದ ಯುವ ಜೋಡಿ ಒಂದೇ ದಿನದ ಅಂತರದಲ್ಲಿ ದಾರುಣವಾಗಿ ಅಂತ್ಯ ಕಂಡಿರುವುದು ಉಭಯ ಕುಟುಂಬಸ್ಥರು ಹಾಗೂ ಸಂಬಂಧಿಕರಲ್ಲಿ ಶೋಕಸಾಗರ ತಂದೊಡ್ಡಿದೆ.




