CrimeKarnataka NewsLatest

*ನಡುರಸ್ತೆಯಲ್ಲಿ ಮೆಡಿಕಲ್ ಶಾಪ್ ಮಾಲಿಕನನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು*

ಪ್ರಗತಿವಾಹಿನಿ ಸುದ್ದಿ: ಮೆಡಿಕಲ್ ಶಾಪ್ ಮಾಲೀಕರೊಬ್ಬರನ್ನು ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

Home add -Advt

ಬೆಂಗಳೂರಿನ ಮಡಿವಾಳದ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಮಂಗಮ್ಮನಪಾಳ್ಯದ ನಿವಾಸಿ, ಮೆಡಿಕಲ್ ಶಾಪ್ ನಡೆಸುತ್ತಿದ್ದ ಸುಹೇಲ್ ಕೊಲೆಯಾದ ದುರ್ದೈವಿ.

ಸುಹೇಲ್ ಮಡಿವಾಳದಿಂದ ಕೊರಮಂಗಲ ಕಡೆಗೆ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಸಿಗ್ನಲ್ ಬಳಿ ಟ್ರಾಫಿಕ್ ಜಾಮ್‌ನಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದಾಗ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಏಕಾಏಕಿ ತಲ್ವಾರ್‌ಗಳಿಂದ ಅವರ ಮೇಲೆ ಹಲ್ಲೆ ನಡೆಸಿದೆ. ಸಾರ್ವಜನಿಕರ ಎದುರೇ ಸುಹೇಲ್ ಅವರನ್ನು ಕೊಚ್ಚಿ ಕೊಲೆ ಮಾಡಿದ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ.

ರೌಡಿಶೀಟರ್ ಶಬ್ಬೀರ್ ಎಂಬಾತನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಬಂಡೆಪಾಳ್ಯದಲ್ಲಿ ಜನವರಿ 13 ರಂದು ಶಬ್ಬೀರ್ ಕೊಲೆಯಾಗಿತ್ತು. ಈತನ ಕೊಲೆ ಪ್ರಕರಣದಲ್ಲಿ ಸುಹೇಲ್ ಸಹೋದರರಾದ ಖಲೀಂ, ನಜೀರ್ ಹಾಗೂ ಇನ್ನೊಬ್ಬ ಸಹೋದರ ಆರೋಪಿಗಳಾಗಿದ್ದರು. ಈ ಪೈಕಿ ಖಲೀಂ ಇನ್ನೂ ಜೈಲಿನಲ್ಲಿದ್ದರೆ, ನಜೀರ್ ಒಂದು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ.

ಸುಹೇಲ್ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರಲಿಲ್ಲ. ಮೆಡಿಕಲ್ ಶಾಪ್ ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ಸಹೋದರರ ಮೇಲಿನ ಸೇಡಿಗೆ ಶಬ್ಬೀರ್ ಸಹಚರರೇ ಸುಹೇಲ್‌ನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Related Articles

Back to top button