*ಸಚಿವ ನಾಗೇಂದ್ರ ರಾಜೀನಾಮೆ ಸಾಧ್ಯತೆ: ಹೊಸದಾಗಿ ಇಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿದ್ಧತೆ*

ಪ್ರಗತಿವಾಹಿನಿ ಸುದ್ದಿ: ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಕುರಿತು ಪ್ರತಿಪಕ್ಷಗಳ ಒತ್ತಡ ಹಾಗೂ ಸಾರ್ವಜನಿಕವಾಗಿ ಹೆಚ್ಚುತ್ತಿರುವ ಆಕ್ರೋಶದ ಹಿನ್ನೆಲೆಯಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ಸಿಎಂ ಡಿ.ಕೆ,ಶಿವಕುಮಾರ್ ಹಾಗೂ ಎಐಸಿಸಿ ನಾಯಕ ರಾಹುಲ್ ಗಾಂಧಿ ಜತೆ ನಡೆಸಿದ ಸಭೆಯಲ್ಲಿ ಒಬ್ಬರನ್ನು ಕೈಬಿಟ್ಟು ಇಬ್ಬರನ್ನು ಸೇರ್ಪಡೆ ಮಾಡಿಕೊಳ್ಳಲು ಚರ್ಚೆ ನಡೆಸಿದ್ದು, ಇದಕ್ಕೆ ಒಪ್ಪಿಗೆ ದೊರೆತಿದೆ. ಸದ್ಯ ಬಿ ನಾಗೇಂದ್ರ ಬದಲಾಗಿ ಸಂಡೂರಿನ ಅನ್ನಪೂರ್ಣ ತುಕಾರಾಂ ಹಾಗೂ ಬ್ಯಾಡಗಿಯ ಬಸವರಾಜ ನೀಲಪ್ಪ ಶಿವಣ್ಣವರ್ ಸಚಿವರಾಗುವ ಸಾಧ್ಯತೆಗಳಿವೆ.
ಸಚಿವ ಸಂಪುಟಕ್ಕೆ ಮಿನಿ ಸರ್ಜರಿ ನಡೆಯಲಿದ್ದು, ಹೊಸದಾಗಿ ಇಬ್ಬರಿಗೆ ಕ್ಯಾಬಿನೆಟ್ನಲ್ಲಿ ಅವಕಾಶ ನೀಡುವ ನಿರೀಕ್ಷೆಯಿದೆ. ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಗುರುವಾರ(ಆ.27) ಬೆಳಗ್ಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು. ರಾಜ್ಯ ರಾಜಕೀಯದಲ್ಲಿನ ವಿದ್ಯಮಾನ ಕುರಿತು ವಿವರಣೆ ನೀಡಿದರು. ಒಬ್ಬರನ್ನು ಕ್ಯಾಬಿನೆಟ್ನಿಂದ ಕೈಬಿಟ್ಟು, ಹೊಸದಾಗಿ ಇಬ್ಬರನ್ನು ತೆಗೆದುಕೊಳ್ಳಲು ಸಣ್ಣ ಪ್ರಮಾಣದಲ್ಲಿ ಸಂಪುಟ ಪುನಾರಚನೆ ಮಾಡುವ ಸಿಎಂ ಪ್ರಸ್ತಾಪಕ್ಕೆ ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸಿದರು ಎಂದು ತಿಳಿದು ಬಂದಿದೆ.
ಪ್ರತಿಪಕ್ಷಗಳ ಬಿಗಿ ಪಟ್ಟು ಹಾಗೂ ಈ ವಿಚಾರದಲ್ಲಿ ಸಾರ್ವಜನಿಕವಾಗಿ ಪಕ್ಷ ಮತ್ತು ಸರ್ಕಾರಕ್ಕೆ ಆಗುತ್ತಿರುವ ಮುಜುಗರದ ಹಿನ್ನೆಲೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆಯಲು ಎಐಸಿಸಿ ಹೈಕಮಾಂಡ್ ಒಪ್ಪಿದೆ. ಒಂದೆರಡು ದಿನಗಳಲ್ಲಿ ನಾಗೇಂದ್ರ ಅವರು ರಾಜೀನಾಮೆ ನೀಡಲಿದ್ದು, ಅದರ ಬೆನ್ನಲ್ಲೇ ಮುಂದಿನ ಸೋಮವಾರ ಅಥವಾ ಮಂಗಳವಾರ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ನಾಗೇಂದ್ರ ಅವರ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ಅದೇ ಪರಿಶಿಷ್ಟ ಪಂಗಡದ ಕೋಟಾದಲ್ಲಿ ಅನ್ನಪೂರ್ಣ ತುಕಾರಾಂ ಅವರಿಗೆ ಅವಕಾಶ ಕಲ್ಪಿಸುವ ಮೂಲಕ ಬಳ್ಳಾರಿ ಜಿಲ್ಲೆಯ ಪ್ರಾತಿನಿಧ್ಯ ಉಳಿಸಿಕೊಳ್ಳುವ ಜತೆಗೆ, ಕ್ಯಾಬಿನೆಟ್ನಲ್ಲಿ ಇಬ್ಬರು ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸುವ ಲೆಕ್ಕಾಚಾರ ಸಹ ನಡೆದಿದೆ. ಹಾಗಾದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಅನ್ನಪೂರ್ಣಾ ತುಕಾರಾಮ್ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಉತ್ತರ ಕರ್ನಾಟಕದ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸಲು ಬ್ಯಾಡಗಿಯ ಬಸವರಾಜ ನೀಲಪ್ಪ ಶಿವಣ್ಣವರ್ ಅವರಿಗೆ ಅವಕಾಶ ನೀಡಬೇಕು ಎಂಬ ತಮ್ಮ ಸಲಹೆಯನ್ನು ಪರಿಗಣಿಸಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸುವ ಯತ್ನವನ್ನೂ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ವಿಧಾನಮಂಡಲ ಅಧಿವೇಶನ ಪೂರ್ತಿ ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದು ಪ್ರತಿಪಕ್ಷಗಳಾದ ಹೋರಾಟ ನಡೆಸಿತ್ತು. ಈಗ ರಾಯಚೂರಿನಿಂದ ಬಳ್ಳಾರಿ ತನಕ ಪಾದಯಾತ್ರೆ ಮಾಡಲೂ ತೀರ್ಮಾನಿಸಿದೆ. ಇದರಿಂದ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವಾಗಲಿದೆ ಎಂಬ ಕಾರಣಕ್ಕೆ ನಾಗೇಂದ್ರ ಅವರ ರಾಜೀನಾಮೆಗೆ ಎಐಸಿಸಿ ವರಿಷ್ಠ ನಾಯಕರು ಬಂದಿದ್ದಾರೆ ಎನ್ನಲಾಗಿದೆ.


