
ಪ್ರಗತಿವಾಹಿನಿ ಸುದ್ದಿ: ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ತಿಂಡಿಯಲ್ಲಿ ಹಲ್ಲಿ ಪತ್ತೆಯಾಗಿರುವ ಘಟನೆ ನಡೆದಿದ್ದು, ರೋಗಿಗಳ ಕುಟುಂಬದವರು ಹಾಗೂ ಸಾರ್ವಜನಿಕರು ಆಸ್ಪತ್ರೆಯ ಕ್ಯಾಂಟೀನ್ ಅವ್ಯವಸ್ಥೆ ಕಂಡು ಕ್ಯಾಂಟೀನ್ ಬಾಗಿಲು ಮುಚ್ಚಿಸಿದ ಘಟನೆ ನಡೆದಿದೆ.
ಬಡ ರೋಗಿಗಳು ತಮ್ಮ ಕಾಯಿಲೆಯಿಂದ ಗುಣಮುಖರಾಗಲು ಜಿಲ್ಲಾಸ್ಪತ್ರೆಗಳಿಗೆ ಬರುತ್ತಾರೆ. ಆದರೆ ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ನಲ್ಲಿ ಸಿಗುವ ಆಹಾರ ಸೇವಿಸಿದರೆ ರೋಗಿಗಳು ಗುಣಮುಖರಾಗುವುದಿಲ್ಲ ಬದಲಾಗಿ ಅವರಿಗೆ ಇನ್ನಷ್ಟು ಹೊಸ ರೋಗಗಳು ಶುರುವಾಗುವಂತಹ ಸ್ಥಿತಿ ಇದೆ.
ಹಾವೇರಿ ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ನಲ್ಲಿ ಕೊಡಲಾಗಿದ್ದ ಬೆಳಗಿನ ಉಪಹಾರ ಕೇಸರಿಬಾತ್ ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ನಲ್ಲಿ ಅವ್ಯವಸ್ಥೆ, ಜಿರಳೆ ಓಡಾಟ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಾರೋಗ್ಯದಿಂದ ದಾಖಲಾಗಿದ್ದ ರೋಗಿಯೊಬ್ಬರ ಕುಟುಂಬದವರು ಇಂದು ಬೆಳಿಗ್ಗೆ ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ಗೆ ಬಂದು ತಿಂಡಿ ತಿಂದು ಬಳಿಕ ಆಸ್ಪತ್ರೆ ವಾರ್ಡ್ ನಲ್ಲಿರುವ ರೋಗಿ ಹಾಗೂ ಸಹಾಯಕರಿಗೆ ಉಪ್ಪಿಟ್ಟು-ಕೇಸರುಬಾತ್ ಪಾರ್ಸಲ್ ತೆಗೆದುಕೊಂಡು ಹೋಗಿದ್ದರು. ಪಾರ್ಸಲ್ ತೆರೆದು ಇನ್ನೇನು ಕೇಸರಿಬಾತ್ ತಿನ್ನಬೇಕು ಎನ್ನುವರ್ಷ್ಟರಲ್ಲಿ ಅದರಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಇದನ್ನು ಕಂಡು ಕಂಗಾಲಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ಒಳ ಪ್ರವೇಶಿಸಿ ಪರಿಶೀಲಿಸಿದಾಗ ಪ್ಲೇಟ್ ಗಳ ಮೇಲೆ ಜಿರಳೆಗಳು ಓಡಾಡುತ್ತಿರುವುದು, ಹುಳಗಳು, ಸ್ವಚ್ಛತೆಯೇ ಇರದ ಜಾಗ ಕಂಡು ದಂಗಾಗಿದ್ದಾರೆ. ತಕ್ಷಣ ಕ್ಯಾಂಟೀನ್ ಬಾಗಿಲು ಹಾಕಿಸಿ ಬೀಗ ಜಡಿದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




