*ಗವಿಸಿದ್ದೇಶ್ವರ ಸ್ವಾಮೀಜಿ ಬಗ್ಗೆ ಸುಳ್ಳು ಸುದ್ದಿ, ವದಂತಿ ಹಬ್ಬಿಸಿದವರ ವಿರುದ್ಧ ಎಫ್ಐಆರ್ ದಾಖಲು*

ಪ್ರಗತಿವಾಹಿನಿ ಸುದ್ದಿ: ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗಿದ್ದ ಸುಳ್ಳು ಸುದ್ದಿ ವಿರುದ್ಧ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಗವಿಸಿದ್ದೇಶ್ವರ ಮಠದ ಶ್ರೀಗಳ ಬಗ್ಗೆ ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ಸುದ್ದಿ ಹಾಗೂ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಡಿಜಿಟಲ್ ಚಾನೆಲ್ವೊಂದರ ವಿರುದ್ದ ಕೊಪ್ಪಳ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಶ್ರೀಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದ ಬೆನ್ನಲ್ಲೇ ಅಪಪ್ರಚಾರ ಮಾಡಲಾಗುತ್ತಿದೆ. ಈ ಬಾರಿಯ ದಸರಾ ಮಹೋತ್ಸವವನ್ನು ಗವಿಮಠದ ಶ್ರೀಗಳು ಉದ್ಘಾಟಿಸಲಿದ್ದಾರೆ ಎಂದು ಅಧಿವೇಶನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕೃತವಾಗಿ ಘೋಷಿಸಿದ್ದರು. ಆದರೆ, ‘ಶ್ರೀಗಳು ದಸರಾ ಉದ್ಘಾಟನೆಯನ್ನು ತಿರಸ್ಕರಿಸಿದ್ದಾರೆ, ಕಾರ್ಖಾನೆಗಳ ವಿಚಾರವಾಗಿ ಕೊಪ್ಪಳವನ್ನು ರಕ್ಷಣೆ ಮಾಡಿದರೆ ಮಾತ್ರ ಉದ್ಘಾಟನೆಗೆ ಬರುವುದಾಗಿ ಶ್ರೀಗಳು ಸರ್ಕಾರಕ್ಕೆ ಷರತ್ತು ವಿಧಿಸಿದ್ದಾರೆ’ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾಅರಿ ವೈರಲ್ ಆಗಿತ್ತು.
ಇನ್ನು ಸುಳ್ಳು ಸುದ್ದಿ ಹರಡುತ್ತಿದ್ದಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮತ್ತು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿ, ‘ಇದು ಶುದ್ಧ ಸುಳ್ಳು ಮಾಹಿತಿ’ ಎಂದು ಸ್ಪಷ್ಟಪಡಿಸಿದ್ದಾರೆ.
ಗವಿಮಠದ ಶ್ರೀಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಕೊಪ್ಪಳ ಪೊಲೀಸರು ಮುಂದಾಗಿದ್ದು, ಕೊಪ್ಪಳ ನಗರ ಠಾಣೆಯ ಇನ್‌ಸ್ಪೆಕ್ಟರ್ ಸುರೇಶ್ ಅವರ ದೂರಿನ ಮೇರೆಗೆ ಡಿಜಿಟಲ್ ಚಾನೆಲ್ವೊಂದರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದೇ ವೇಳೆ ಸಾರ್ವಜನಿಕ ಶಾಂತಿ ಕದಡುವ ಹಾಗೂ ಗಣ್ಯರ ವಿರುದ್ಧ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಭಾಗ್ಲಾ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಸರಾ ಉದ್ಘಾಟಕರ ಹೆಸರನ್ನು ಘೋಷಣೆ ಮಾಡಿದ ದಿನ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಮೌನ ಅನುಷ್ಠಾನದಲ್ಲಿದ್ದರು. ಸದ್ಯ ಶ್ರೀಗಳು ಭಕ್ತರ ಮನೆಗೆಂದು ಬೇರೆ ಜಿಲ್ಲೆಗೆ ತೆರಳಿದ್ದಾರೆ. ನಾಳೆ ಸೋಮವಾರದಂದು ಸಚಿವ ಶಿವರಾಜ್ ತಂಗಡಗಿ ಶ್ರೀಗಳನ್ನು ಭೇಟಿಯಾಗಿ ಅಧಿಕೃತವಾಗಿ ದಸರಾ ಉದ್ಘಾಟನೆಗೆ ಆಹ್ವಾನ ನೀಡಲಿದ್ದಾರೆ. ಈ ನಡುವೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ‘ಗವಿಮಠದ ಶ್ರೀಗಳು ಅತ್ಯಂತ ಸಂತೋಷದಿಂದ ದಸರಾ ಉದ್ಘಾಟನೆಗೆ ಬರಲು ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



