*ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು*: *ಡೀಲರ್ನಿಂದಲೇ ಪೊಲೀಸರಿಗೆ ದೂರು*

ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಕನ್ನಡದಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮತ್ತೊಂದು ಕೊಲೆ ನಡೆಸಲು ಸಂಚು ರೂಪಿಸಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲು 24ರಿಂದ 25 ಲಕ್ಷ ರೂಪಾಯಿಗೆ ಸುಪಾರಿ ನೀಡುವ ಮಾತುಕತೆ ನಡೆದಿತ್ತು ಎಂದು ಆರೋಪಿಸಲಾಗಿದೆ. ಈ ಸಂಚಿನಲ್ಲಿ ಭಾಗಿಯಾಗಿದ್ದ ಯುವಕನೊಬ್ಬ ಕೊನೆಯ ಹಂತದಲ್ಲಿ ಮನಪರಿವರ್ತನೆಗೊಂಡು ಬಜ್ಪೆ ಪೊಲೀಸರಿಗೆ ದೂರು ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಬೆಳ್ತಂಗಡಿ ತಾಲೂಕಿನ ಮಿತ್ತೊಟ್ಟು ಕಾಶಿಪಟ್ಲದ ಅಭಿಷೇಕ್ ದೂರು ನೀಡಿರುವ ಯುವಕ. 2025ರ ಮೇನಲ್ಲಿ ಸುಹಾಸ್ ಶೆಟ್ಟಿ ಹತ್ಯೆಯಾದ ಬಳಿಕ ಉಡುಪಿಯ ಸುದೀಪ್ ಎಂಬಾತ ತನ್ನನ್ನು ಸಂಪರ್ಕಿಸಿದ್ದ ಎಂದು ಅಭಿಷೇಕ್ ದೂರಿನಲ್ಲಿ ತಿಳಿಸಿದ್ದಾರೆ. ಪ್ರತೀಕಾರವಾಗಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಬೇಕು ಎಂದು ಸುದೀಪ್ ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.
ನಾಲ್ಕು ತಿಂಗಳ ಹಿಂದೆ ಅಭಿಷೇಕ್ ಮತ್ತು ಆತನ ಸ್ನೇಹಿತ ಕೀರ್ತನ್ನನ್ನು ಉಡುಪಿಗೆ ಕರೆಸಿಕೊಂಡು ಮಹೇಶ್ ಎಂಬಾತನ ಪರಿಚಯ ಮಾಡಿಸಲಾಗಿತ್ತು. ಬಳಿಕ ಬಜ್ಪೆ ಕಿನ್ನಿಪದವಿನ ವ್ಯಕ್ತಿಯೊಬ್ಬರ ಫೋಟೋ ನೀಡಿ ಆತನನ್ನು ಹತ್ಯೆ ಮಾಡಲು ಸೂಚಿಸಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೊಲೆ ಮಾಡಿದರೆ 24ರಿಂದ 25 ಲಕ್ಷ ರೂಪಾಯಿ ನೀಡುವುದರ ಜೊತೆಗೆ, ಜೈಲಿಗೆ ಹೋದರೆ ಕುಟುಂಬದ ನಿರ್ವಹಣೆಗೆ ಪ್ರತಿ ತಿಂಗಳು 15 ಸಾವಿರ ರೂ. ಹಾಗೂ 5 ಸಾವಿರ ರೂ. ಮೌಲ್ಯದ ದಿನಸಿ ನೀಡುವುದಾಗಿ ಭರವಸೆ ನೀಡಲಾಗಿತ್ತಂತೆ.
ಆದರೆ ಈ ನಡುವೆ ಅಭಿಷೇಕ್ ಪತ್ನಿ ಹೆರಿಗೆಯಾದ ಬಳಿಕ ಆತನ ಮನಸ್ಥಿತಿ ಬದಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜೈಲು ಪಾಲಾಗುವ ಭಯದಿಂದ ಕೃತ್ಯದಿಂದ ಹಿಂದೆ ಸರಿದ ಅಭಿಷೇಕ್, ವಾಟ್ಸಾಪ್ ಚಾಟ್ಗಳು, ಸ್ಕ್ರೀನ್ಶಾಟ್ಗಳು ಮತ್ತು ಆಡಿಯೋ ದಾಖಲೆಗಳೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಕೊಲೆಗಾಗಿ ಎರಡು ತಲವಾರುಗಳನ್ನು ಸಿದ್ಧಪಡಿಸಿಕೊಂಡಿದ್ದಾಗಿ ಕೂಡ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತನಿಖೆಯನ್ನು ಸಿಸಿಬಿಗೆ ಹಸ್ತಾಂತರಿಸಿದ್ದಾರೆ. ಎಫ್ಐಆರ್ ದಾಖಲಾಗಿದ್ದು, ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ. ಇದೇ ವೇಳೆ, ದಕ್ಷಿಣ ಕನ್ನಡದಲ್ಲಿ ಗೂಂಡಾ ಕಾಯ್ದೆ ಹಾಗೂ ಪೊಲೀಸ್ ನೋಟಿಸ್ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಬಿ.ಸಿ.ರೋಡ್ ಚಲೋಗೆ ಕರೆ ನೀಡಿರುವುದರಿಂದ ಕರಾವಳಿಯಲ್ಲಿ ರಾಜಕೀಯ ಮತ್ತು ಸಂಘಟನಾ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



