Kannada NewsKarnataka NewsPolitics

*ಮಂಪರು ಪರೀಕ್ಷೆ ಯಾಕೆ ಬೇಕು? ಏನು ಆಧಾರವಿದೆ? ಮೊದಲು ಎಸ್ ಪಿಗೆ ಮಂಪರು ಪರೀಕ್ಷೆ ಮಾಡಲಿ: ಕಲ್ಲಡ್ಕ ಪ್ರಭಾಕರ ಭಟ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ತಮಗೆ ನೋಟಿಸ್ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಕೇವಲ ಫೋನ್ ಮಾಡಿದ್ದಕ್ಕೆ ನನ್ನನ್ನು ವಿಚಾರಣೆಗೆ ಕರೆಯುವುದೇ ಎಂದು ಗರಂ ಆದರು.

ಮಂಗಳೂರಿನಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಭರತ್ ಕುಮ್ದೇಲ್​ಗೆ ಮಂಪರು ಪರೀಕ್ಷೆ ಯಾಕೆ ಬೇಕು? ಏನು ಆಧಾರ ಇದೆ ಮಂಪರು ಪರೀಕ್ಷೆ ಮಾಡಲು?, ಅಧಿಕಾರಿಗಳ ತಲೆಯಲ್ಲಿ ಏನಿದೆ? ಮೊದಲು ಎಸ್ಪಿ ಅರುಣ್ ಕುಮಾರ್ ಮಂಪರು ಪರೀಕ್ಷೆ ಮಾಡಿಕೊಳ್ಳಲಿ. ಆಮೇಲೆ ಬೇರೆಯವರ ಮಂಪರು ಪರೀಕ್ಷೆ ಬಗ್ಗೆ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಫೋನ್ ಮಾಡಿದ್ದಕ್ಕೆ ನನ್ನನ್ನ ವಿಚಾರಣೆಗೆ ಕರೆಯೋದಾ? ನಾನು ಜೈಲಿಗೆ ಹೋಗಿಯಾಗಿದೆ, ನನ್ನದು ಸಾಲದು ಅಂತಾ ನನ್ನ ಹೆಂಡತಿಯನ್ನು ಜೈಲಿಗೆ ಹಾಕಿದ್ದಾರೆ. ಇನ್ನು ಏನಿದ್ರೂ ಇದ್ರೆ ಗಲ್ಲಿಗೆ ಹಾಕಬೇಕು. ಅಷ್ಟು ಮಾತ್ರ ಬಾಕಿ ಇರೋದು. ತಾಕತ್ ಇದ್ರೆ ನನ್ನನ್ನ ಗಲ್ಲಿಗೆ ಹಾಕಲಿ ಎಂದು ಗುಡುಗಿದರು.

ನನ್ನ ಮೇಲೂ ಗೂಂಡಾ ಕಾಯ್ದೆ ಹಾಕುವ ಯೋಚನೆಯೂ ಇರಬಹುದು. ಹಾಗಾಗಿ ವಿಚಾರಣೆ ಎಂದು ನೋಟಿಸ್ ಕೊಟ್ಟಿರಬಹುದು. ದೇಶ ವಿರೋಧಿ, ಸಮಾಜ ವಿರೋಧಿ ಕೆಲಸದಲ್ಲಿದ್ರೆ ಕೇಸ್ ಹಾಕಬೇಕು. ಪೊಲೀಸರು ಜನ ಸ್ನೇಹಿಯಾಗಬೇಕು. ಕೋರ್ಟ್ ನಲ್ಲಿ ಪೊಲೀಸರಿಗೆ ಜಡ್ಜ್ ತಪರಾಕಿ ಹಾಕಿದ್ದಾರೆ ಎಂದು ತಿಳಿಸಿದರು.

ಇನ್ನು ಸೌಜನ್ಯ ಹತ್ಯೆ ಕೇಸ್ ವಿಚರವಾಗಿ ಸುಪ್ರೀಂ ಕೋರ್ಟ್ ಮರುತನಿಖೆಗೆ ಆದೇಶ ನೀಡಿರುವುದನ್ನು ಸ್ವಾಗತಿಸಿದ ಪ್ರಭಾಕರ್ ಭಟ್, ರಾಜ್ಯ ಸರ್ಕಾರ ಕೂಡ ಎಸ್ ಐಟಿ ರಚಿಸಿದೆ. ಸರ್ಕಾರ ರಚಿಸಿರುವ ಎಸ್ಐಟಿ ಬಗ್ಗೆ ಸ್ವಲ್ಪ ಅಸಮಾಧಾನವಿದೆ ಎಂದರು.

ಸುಧೀರ್ ಕುಮಾರ್ ರೆಡ್ಡಿಯಂತವರೇ ಎಸ್ಐಟಿಯಲ್ಲಿದ್ರೆ ಒಳ್ಳೆಯದು.ಪ್ರಕರಣದಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ಮಾಡಲಿ. ಬೇರೆ ಯಾವುದೇ ಪ್ರಕರಣದಲ್ಲಿ ಈ ರೀತಿಯಾಗಿಲ್ಲ. ಎಸ್​ಐಟಿ ತಂಡ ನ್ಯಾಯ ಕೊಡುವ ಕೆಲಸ ಮಾಡಲಿ. ಅಧಿಕಾರಿಗಳು ಆ ಕಡೆ, ಈ ಕಡೆ ನೋಡದೆ, ಸತ್ಯ ಏನೆಂದು ಹುಡುಕಲಿ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button