
ಪ್ರಗತಿವಾಹಿನಿ ಸುದ್ದಿ: ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ನಿನ್ನೆ ತಡರಾತ್ರಿ ಸುರಿದ ಮಳೆಯ ಬಳಿಕ ಇಂದು ಬೆಳಗ್ಗೆಯೂ ನಗರದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ಭಾರಿ ಮಳೆಯಿಂದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಹಲವೆಡೆ ವಾಹನ ಸಂಚಾರ ನಿಧಾನಗೊಂಡಿದೆ.
ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ, ಶಾಂತಿನಗರ, ವಿಜಯನಗರ, ಕೆಂಗೇರಿ, ದೀಪಾಂಜಲಿನಗರ, ರಾಜಾಜಿನಗರ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ. ಅಂಜನಾಪುರ, ಗೊಟ್ಟಿಗೆರೆ, ಅವಳಹಳ್ಳಿ, ಬನಶಂಕರಿ, ಕೋಣನಕುಂಟೆ, ಆರ್‌ಬಿಐ ಲೇಔಟ್, ಕುಮಾರಸ್ವಾಮಿ ಲೇಔಟ್, ರಿಚ್‌ಮಂಡ್ ಸರ್ಕಲ್, ಎಂ.ಜಿ. ರಸ್ತೆ, ನಂದಿನಿ ಲೇಔಟ್, ಶೇಷಾದ್ರಿಪುರಂ ಹಾಗೂ ಮಲ್ಲೇಶ್ವರಂ ಭಾಗಗಳಲ್ಲೂ ಮಳೆ ಅಬ್ಬರಿಸಿದೆ.
ನಿರಂತರ ಮಳೆಯಿಂದ ಹಲವು ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಗಳಲ್ಲಿ ನೀರು ನಿಂತಿರುವ ಹಿನ್ನೆಲೆಯಲ್ಲಿ ಕೆಲ ಮಾರ್ಗಗಳಲ್ಲಿ ವಾಹನಗಳ ವೇಗ ಕಡಿಮೆಯಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಕಾರ್ತಿಕನಗರದಲ್ಲಿ ನೀರು ನಿಂತಿರುವುದರಿಂದ ಕಾಡುಬೀಸನಹಳ್ಳಿ ಕಡೆಗೆ ತೆರಳುವ ವಾಹನಗಳ ಸಂಚಾರ ನಿಧಾನಗೊಂಡಿದೆ. ವೆಂಕಟಾಲದಲ್ಲಿ ನಗರದೆಡೆಗೆ ಸಾಗುವ ರಸ್ತೆಯಲ್ಲೂ ನೀರು ನಿಂತಿದ್ದು, ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ಶ್ರೀನಿವಾಗಿಲು ಬಳಿ ಮಳೆ ನೀರು ನಿಂತ ಪರಿಣಾಮ ಏರ್‌ವ್ಯೂ ಕಡೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಥಣಿಸಂದ್ರದಲ್ಲೂ ನಾಗವಾರದ ಕಡೆಗೆ ತೆರಳುವ ಮಾರ್ಗದಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಮಲ್ಲೇಶ್ವರಂನಲ್ಲಿ ಭಾರಿ ಮಳೆಗೆ ಬೃಹತ್ ಮರವೊಂದು ರಸ್ತೆಗೆ ಉರುಳಿಬಿದ್ದು, ಎರಡು ಕಾರುಗಳಿಗೆ ಹಾನಿಯಾಗಿದೆ. ವೈಟ್‌ಫೀಲ್ಡ್ ಹಾಗೂ ಮಾರತ್ತಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ದಟ್ಟಣೆ ಉಂಟಾಗಿದೆ.
ಮಳೆಯ ನಡುವೆಯೇ ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಬಳಿ ಅಪಘಾತ ಸಂಭವಿಸಿದೆ.
ನೆಲಮಂಗಲ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯಿಂದ ರಸ್ತೆ ಸರಿಯಾಗಿ ಕಾಣಿಸದ ಹಿನ್ನೆಲೆಯಲ್ಲಿ ಈಚರ್ ಲಾರಿಯೊಂದು 108 ಆಂಬ್ಯುಲೆನ್ಸ್‌ಗೆ ಡಿಕ್ಕಿ ಹೊಡೆದಿದೆ. ಮಾಹಿತಿ ತಿಳಿದು ಚಿಕ್ಕಬಾಣಾವಾರ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಎರಡೂ ವಾಹನಗಳನ್ನು ತೆರವುಗೊಳಿಸಿದ್ದಾರೆ.
ನಗರದ ಹಲವು ಭಾಗಗಳಲ್ಲಿ ಇನ್ನೂ ಮಳೆ ನೀರು ನಿಂತಿರುವ ಹಿನ್ನೆಲೆಯಲ್ಲಿ ಬೆಳಗ್ಗಿನ ವೇಳೆಯೂ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



