*ಕೊರಿಯನ್ BTS ಬ್ಯಾಂಡ್ ಭೇಟಿಯಾಗಲು ಮನೆ ಬಿಟ್ಟಿದ್ದ 13 ವರ್ಷದ ಬಾಲಕಿ*: *ಕೊನೆಗೆ ಆಗಿದ್ದೇನು*?

ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಕೊರಿಯಾದ ಖ್ಯಾತ ಬಿಟಿಎಸ್ ಪಾಪ್ ಬ್ಯಾಂಡ್ ಸದಸ್ಯರನ್ನು ಭೇಟಿಯಾಗಬೇಕೆಂಬ ಆಸೆಯಿಂದ 13 ವರ್ಷದ ಬಾಲಕಿಯೊಬ್ಬಳು ಮನೆ ತೊರೆದ ಘಟನೆ ನಡೆದಿದೆ. ಕೊರಿಯನ್ ಹಾಡುಗಳು, ಸಿನಿಮಾಗಳು ಮತ್ತು ವೆಬ್ ಸರಣಿಗಳ ಪ್ರಭಾವಕ್ಕೆ ಒಳಗಾಗಿದ್ದ ಬಾಲಕಿ ದಕ್ಷಿಣ ಕೊರಿಯಾಗೆ ತೆರಳುವ ಹಠಕ್ಕೆ ಬಿದ್ದಿದ್ದು ಇದೀಗ ಸುರಕ್ಷಿತವಾಗಿ ಕುಟುಂಬಕ್ಕೆ ಮರಳಿದ್ದಾಳೆ.
ಮೂಲತಃ ಮಹಾರಾಷ್ಟ್ರದವರಾಗಿದ್ದು, ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಹೆಬ್ಬಗೋಡಿಯಲ್ಲಿ ನೆಲೆಸಿರುವ ದಂಪತಿಯ 13 ವರ್ಷದ ಪುತ್ರಿ ಎಂದು ಹೇಳಲಾಗಿದೆ. ಬಾಲಕಿ ಮನೆಯಿಂದ ಹೊರಬಂದ ಬಳಿಕ ಇಡೀ ದಿನ ಬೆಂಗಳೂರಿನ ವಿವಿಧೆಡೆ ಸುತ್ತಾಡಿದ್ದಳು. ಮಧ್ಯರಾತ್ರಿ ವೇಳೆಗೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ ತಲುಪಿದ್ದ ಬಾಲಕಿಯನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ.
ಟಿಕೆಟ್ ಇಲ್ಲದೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಾಲಕಿಯನ್ನು ಕಂಡ ಮೆಟ್ರೋ ಭದ್ರತಾ ಸಿಬ್ಬಂದಿ ತಕ್ಷಣ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಚಂದ್ರಾ ಲೇಔಟ್ ಠಾಣೆಯ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ.
ಬಾಲಕಿಯನ್ನು ವಿಚಾರಣೆ ನಡೆಸಿದಾಗ ದಕ್ಷಿಣ ಕೊರಿಯಾಗೆ ತೆರಳಿ ಬಿಟಿಎಸ್ ತಂಡವನ್ನು ಭೇಟಿಯಾಗುವ ಆಸೆಯಿಂದ ಮನೆ ಬಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರ ವಿಚಾರಣೆ ವೇಳೆ ಬಾಲಕಿ ಕೊರಿಯನ್ ಹಾಡುಗಳು, ವೆಬ್ ಸರಣಿಗಳು ಹಾಗೂ ಸಿನಿಮಾಗಳನ್ನು ಹೆಚ್ಚು ವೀಕ್ಷಿಸುತ್ತಿದ್ದ ವಿಚಾರ ತಿಳಿದುಬಂದಿದೆ. ಬಿಟಿಎಸ್ ತಂಡದ ಪ್ರಭಾವಕ್ಕೆ ಒಳಗಾಗಿದ್ದ ಬಾಲಕಿ, ವೇಷಭೂಷಣ, ಮಾತಿನ ಶೈಲಿ ಹಾಗೂ ಹಾವಭಾವಗಳಲ್ಲೂ ಕೊರಿಯನ್ ಸಂಸ್ಕೃತಿಯನ್ನು ಅನುಸರಿಸಲು ಆರಂಭಿಸಿದ್ದಳು.
ದಕ್ಷಿಣ ಕೊರಿಯಾಗೆ ಹೋಗಿ ಬಿಟಿಎಸ್ ತಂಡವನ್ನು ಭೇಟಿಯಾಗಬೇಕು ಎಂದು ಬಾಲಕಿ ಆಗಾಗ ಮನೆಯಲ್ಲಿ ಹೇಳುತ್ತಿದ್ದಳು. ಇದೇ ಆಸೆಯಿಂದ ಬುಧವಾರ ಬೆಳಗ್ಗೆ ಹೆಬ್ಬಗೋಡಿಯ ನಿವಾಸದಿಂದ ಯಾರಿಗೂ ಮಾಹಿತಿ ನೀಡದೆ ಹೊರಟಿದ್ದಳು.
ಇತ್ತ ಬಾಲಕಿ ಮನೆಗೆ ಮರಳದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಇದೇ ವೇಳೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಬಾಲಕಿ ಪತ್ತೆಯಾಗಿದ್ದರಿಂದ ಚಂದ್ರಾ ಲೇಔಟ್ ಪೊಲೀಸರು ಹೆಬ್ಬಗೋಡಿ ಠಾಣೆಯ ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ. ನಂತರ ಪೋಷಕರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಬಾಲಕಿಯನ್ನು ಸುರಕ್ಷಿತವಾಗಿ ಕುಟುಂಬದ ವಶಕ್ಕೆ ಒಪ್ಪಿಸಿದ್ದಾರೆ. ಬಾಲಕಿಗೆ ಸೂಕ್ತ ಕೌನ್ಸೆಲಿಂಗ್ ನೀಡಿದ ಬಳಿಕ ಪೋಷಕರೊಂದಿಗೆ ಕಳುಹಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

