Film & EntertainmentKannada NewsLatestNational

*ಕನ್ನಡದ ಜ್ಯೂಲಿ ಖ್ಯಾತಿಯ ಬಾಲಿವುಡ್ ನಟ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕನ್ನಡದ ಜ್ಯೂಲಿ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಡಿನೊ ಮೊರಿಯಾ ಅವರನ್ನು ಮುಂಬೈ ಪ್ಲೀಸ್ ಆರ್ಥಿಕ ಅಪರಾಧ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಬರೋಬ್ಬರಿ 65.54 ಕೋಟಿ ರೂಪಾಯಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಡಿನೊ ಮೊರಿಯಾ ಅವರನ್ನು ಮುಂಬೈನ ಅವರ ನಿವಾಸದಿಂದಲೇ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಮುಂಬೈನ ಮಿಥಿ ನದಿಯ ಹೂಳು ತೆಗೆಯುವ ಮತ್ತು ನವೀಕರಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ 65.54 ಕೋಟಿ ರೂಪಾಯಿ ಹಗರಣದ ತನಿಖೆಯ ಸಂಬಂಧ ನಟನನ್ನು ಅವರ ಸ್ವಗೃಹದಿಂದಲೇ ಮುಂಬೈ ಪೊಲೀಸ್​​ನ ಆರ್ಥಿಕ ಅಪರಾಧ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬಂಧನಕ್ಕೂ ಮುನ್ನ ಮುಂಬೈನ ಬಾಂದ್ರಾದಲ್ಲಿರುವ ನಟ ಡಿನೊ ಮೊರಿಯಾ ನಿವಾಸದಲ್ಲಿ ಮುಂಬೈ ಪೊಲೀಸರು ಸತತ ಎಂಟು ಗಂಟೆಗಳಿಗೂ ಹೆಚ್ಚು ಕಾಲ ತೀವ್ರ ವಿಚಾರಣೆ ನಡೆಸಿದ್ದು, ವಿಚಾರಣೆ ಬಳಿಕ ನಟನನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಬಿಎಂಸಿ (BMC) ಕಚೇರಿಗೆ ಸುಮಾರು 65.54 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎನ್ನಲಾಗಿದೆ.

ಮಿಥಿ ನದಿ ಹೂಳು ತೆಗೆಯುವ ಗುತ್ತಿಗೆಗೆ ಸಂಬಂಧಿಸಿದಂತೆ ನಡೆದ ಆರ್ಥಿಕ ಅನಿಯಮಿತತೆಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಹಗರಣದಲ್ಲಿ ಗುತ್ತಿಗೆದಾರರು, ಮಧ್ಯವರ್ತಿಗಳು ಮತ್ತು ನಾಗರಿಕ ಸಂಸ್ಥೆಯ ಅಧಿಕಾರಿಗಳ ಕೈವಾಡವಿರುವ ಬಗ್ಗೆ ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಇದೇ ಪ್ರಕರಣದಲ್ಲಿ 2025ರಲ್ಲೂ ಡಿನ್ ಮೊರಿಯಾ ಅವರನ್ನು ವಿಚಾರಣೆ ನಡೆಸಲಾಗಿತ್ತು. ತನಿಖೆಯ ವೇಳೆ ಪೊಲೀಸರಿಗೆ ದೊರೆತ ಫೋನ್ ದಾಖಲೆಗಳು ಮತ್ತು ನಟನ ಸಹೋದರ ಸ್ಯಾಂಟಿನೋ ಮೊರಿಯಾ ಅವರ ‘ಯುಬಿಒ ರೈಡ್ಜ್’ ಕಂಪನಿಯ ಆರ್ಥಿಕ ವ್ಯವಹಾರಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ಹಗರಣದಲ್ಲಿ ಈಗಾಗಲೇ 2025ರಲ್ಲಿ ಬಂಧನಕ್ಕೊಳಗಾಗಿರುವ ಕೇತನ್ ಕದಮ್ ಎಂಬಾತನ ಮೇಲೆಯೂ ತನಿಖೆ ನಡೆಸಲಾಗಿದೆ. ನದಿ ಸ್ವಚ್ಛತಾ ಕಾರ್ಯದ ಗುತ್ತಿಗೆಗಳ ಹಂಚಿಕೆ ಮತ್ತು ಅದಕ್ಕೆ ಸಂಬಂಧಿಸಿದ ಹಣಕಾಸಿನ ಪಾವತಿಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button