Belagavi NewsBelgaum NewsKannada NewsKarnataka NewsNationalPolitics

*ಬಾಪೂಜಿ ತತ್ವಗಳನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು: ಪಾಲಿಕೆ ಆಯುಕ್ತ ಕಾರ್ತಿಕ್. ಎಂ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ಜೀವನವೇ ಒಂದು ಸಂದೇಶವಾಗಿದೆ. ಸತ್ಯ, ಅಹಿಂಸೆ, ಸರಳತೆಯಂತಹ ಅವರ ತತ್ವಗಳನ್ನು ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಟಿಳಕವಾಡಿಯ ವೀರಸೌಧದಲ್ಲಿ ಶುಕ್ರವಾರ (ಅ.02) ನಡೆದ ಮಹಾತ್ಮಾ ಗಾಂಧೀಜಿಯವರ 157ನೇ ಜಯಂತಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಂಧೀಜಿಯವರಿಗೆ ರಾಜಕೀಯವಾಗಿ ಹಲವು ಅವಕಾಶಗಳಿದ್ದರೂ ಅವರು ಸರಳ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದರು. ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು.

ನೀಡಿದ ಅವರು ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಗಾಂಧೀಜಿಯವರ ಜೀವನ ಮತ್ತು ಸಂದೇಶವನ್ನು ಅರಿಯಲು ಪ್ರತಿಯೊಬ್ಬರೂ ಅವರ ಜೀವನಚರಿತ್ರೆಯನ್ನು ಓದಬೇಕು ಎಂದು ಸಲಹೆ ನೀಡಿದರು.

ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಮ್ಮ ಮನಸ್ಸಿನೊಂದಿಗೆ ನಗರ ಹಾಗೂ ಸುತ್ತಮುತ್ತಲಿನ ಪರಿಸರವನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಮಾಜಕ್ಕೆ ಉಪಯುಕ್ತವಾದ ಕಾರ್ಯಗಳನ್ನು ಮಾಡುವುದರಿಂದ ನಿಜವಾದ ತೃಪ್ತಿ ದೊರೆಯುತ್ತದೆ. ಮಹಾನಗರ ಪಾಲಿಕೆಯ ವತಿಯಿಂದ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಕಾರ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಕಾರ್ತಿಕ್ ಎಂ. ಹೇಳಿದರು.

ಗಾಂಧೀಜಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಡಾ. ಪಿ.ಜಿ. ಕೆಂಪಣ್ಣವರ, ಮಹಾತ್ಮ ಗಾಂಧೀಜಿಯವರು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಶಾಂತಿ ಮತ್ತು ಸತ್ಯದ ಸಂದೇಶವನ್ನು ಸಾರಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಸತ್ಯ, ಸರಳತೆ, ತ್ಯಾಗ ಹಾಗೂ ಅಹಿಂಸೆಯಂತಹ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಮಹಾನ್ ಸಾಧಕರ ಬದುಕಿನ ಹಿಂದೆ ಕುಟುಂಬ ಹಾಗೂ ಮಹಿಳೆಯರ ಪಾತ್ರವೂ ಮಹತ್ವದ್ದಾಗಿದೆ. ಗಾಂಧೀಜಿಯವರ ಬದುಕಿನ ಮೇಲೆ ಅವರ ತಾಯಿ ಪುತಳಿಬಾಯಿ ಸಂಸ್ಕಾರ ಮತ್ತು ಮೌಲ್ಯಗಳು ಪ್ರಭಾವ ಬೀರಿದ್ದವು. ಇಂದಿನ ವಿದ್ಯಾರ್ಥಿಗಳು ತ್ಯಾಗದ ಮನೋಭಾವವನ್ನು ಬೆಳೆಸಿಕೊಳ್ಳುವುದರ ಜೊತೆಗೆ ದೇಶ ಭಕ್ತಿ ಬೆಳಸಿಕೊಳ್ಳಬೇಕು ಎಂದರು.

ಅದೇ ರೀತಿಯಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳತೆ, ಪ್ರಾಮಾಣಿಕತೆ, ಶಿಸ್ತು ಹಾಗೂ ದೇಶಪ್ರೇಮದ ಗುಣಗಳು ಪ್ರತಿಯೊಬ್ಬರಿಗೂ ಆದರ್ಶವಾಗಿವೆ ಎಂದು ಸಾಹಿತಿ ಡಾ. ಪಿ.ಜಿ. ಕೆಂಪಣ್ಣವರ ಉಪನ್ಯಾಸ ನೀಡಿದರು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ ಪ್ರಾಸ್ತಾವಿಕವಾಗಿ ಮಾತನಾಡಿ ಸೂರ್ಯ-ಚಂದ್ರ ಇರುವವರೆಗೆ ಮಹಾತ್ಮ ಗಾಂಧೀಜಿಯವರ ಹೆಸರು ಅಚ್ಚಳಿಯದೆ ಉಳಿಯಲಿದೆ. ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ಅವರು ನಡೆಸಿದ ಹೋರಾಟ ಇಡೀ ಜಗತ್ತಿಗೆ ಮಹತ್ವದ ಸಂದೇಶವನ್ನು ನೀಡಿದೆ. ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಹಾಗೂ ದೇಶಕ್ಕೆ ಅನ್ನ ನೀಡುವಲ್ಲಿ ರೈತರ ಕೊಡುಗೆ ಮಹತ್ವದ್ದಾಗಿದೆ. ಇದನ್ನು ಮನಗಂಡು‌ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು “ಜೈ ಜವಾನ್-ಜೈ ಕಿಸಾನ್” ಘೋಷಣೆ ನೀಡಿದರು. ಶಾಸ್ತ್ರೀಜಿಯವರ ದೇಶಭಕ್ತಿ, ಸರಳ ಜೀವನ ಅನುಕರಣೀಯ ಎಂದು ತಿಳಿಸಿದರು.

ಜನಪದ ಪುಸ್ತಕ ಬಿಡುಗಡೆ

ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಮಹಾತ್ಮ ಗಾಂಧೀಜಿಯವರ ಜೀವನಸಾಧನೆ ಕುರಿತು ಪ್ರಕಟಿಸಲಾದ ಅಕ್ಟೋಬರ್ ಮಾಹೆಯ ವಿಶೇಷ ಜನಪದ ಸಂಚಿಕೆಯನ್ನು  ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ಬಿಡುಗಡೆ ಮಾಡಿದರು.

ಬಾಪೂಜಿ ಪ್ರಬಂಧ ಸ್ಪರ್ಧೆ; ಪ್ರಶಸ್ತಿ ಪತ್ರ ವಿತರಣೆ

ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಅಂಗವಾಗಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಬಾಪೂಜಿ’ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾದ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ವಿನಾಯಕ ಮೋರೆ ಹಾಗೂ ತಂಡದವರು ಗಾಂಧೀಜಿಯವರಿಗೆ ಪ್ರಿಯವಾದ ಭಜನಾ ಗೀತೆಗಳನ್ನು ಸುಮಧುರವಾಗಿ ಪ್ರಸ್ತುತಪಡಿಸಿದರು. ಗಾಂಧೀಜಿಯವರ ಸತ್ಯ, ಅಹಿಂಸೆ ಹಾಗೂ ಶಾಂತಿಯ ಸಂದೇಶಗಳನ್ನು ಸಾರುವ ಭಜನಾ ಗೀತೆಗಳ ಗಾಯನವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ಭಜನಾ ಗಾಯನದ ಮೂಲಕ ಗಾಂಧೀಜಿಯವರ ಆದರ್ಶಗಳು ಹಾಗೂ ವಿಚಾರಧಾರೆಗಳನ್ನು ಸ್ಮರಿಸಲಾಯಿತು.

ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ನಾಯಕ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಮಹಾಂತೇಶ್ ಮುರಗೋಡ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ರಾಜೇಂದ್ರ ಕಲಘಟಗಿ, ಭಾರತ ಸೇವಾದಳದ ವಿಶ್ರಾಂತ ದಳಪತಿಗಳಾದ ಬಸವರಾಜ ಹಟ್ಟಿಗೌಡರ, ಭಾರತ ಸೇವಾದಳದ ಜಿಲ್ಲಾ ಸಂಘಟಕ ಅನಿಲ್ ಪತ್ತಾರ, ಶ್ರೀರಂಗ ಜೋಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ರಾಜೇಂದ್ರ ಕಲಘಟಗಿ, ಭಾರತ ಸೇವಾದಳದ ವಿಶ್ರಾಂತ ದಳಪತಿಗಳಾದ ಬಸವರಾಜ ಹಟ್ಟಿಗೌಡರ ಅವರನ್ನು ಸನ್ಮಾನಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button